

ಭಾಲ್ಕಿ: ಚನ್ನಬಸವಾಶ್ರಮ ಪರಿಸರದಲ್ಲಿ ಭಾನುವಾರ ಹಮ್ಮಿಕೊಂಡಿರುವ ಯೋಗ ಮಹೋತ್ಸವದಲ್ಲಿ ಯೋಗಾಸಕ್ತರು ಪರಿವಾರದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶುಕ್ರವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಸೂರ್ಯ ಫೌಂಡೇಷನ್, ಭಾರತ ಸರ್ಕಾರದ ಆಯುಷ್ ಇಲಾಖೆ (ಐಎನ್‌ಒ) ಸಹಯೋಗದಡಿ ಬೆಳಗ್ಗೆ ೬ಕ್ಕೆ ಯೋಗ ಮಹೋತ್ಸವ ಜರುಗಲಿದೆ. ಸದ್ಭಕ್ತರು ಕುಟುಂಬ ಸದಸ್ಯರೊಂದಿಗೆ ಭಾಗವಹಿಸುವುದರ ಜತೆಗೆ ಸುತ್ತಮುತ್ತಲಿನ ಜನರನ್ನು ಕರೆತಂದು ಯೋಗ ಮಹೋತ್ಸವ ಐತಿಹಾಸಿಕವಾಗಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಅಂದು ಬೆಳಗ್ಗೆ ೬ಕ್ಕೆ ನಡೆಯುವ ಯೋಗ ಮಹೋತ್ಸವದಲ್ಲಿ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ, ಪತಂಜಲಿ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ, ಸೂರ್ಯ ಫೌಂಡೇಷನ್ ರಾಷ್ಟ್ರೀಯ ಉಪಾಧ್ಯಕ್ಷ ಅನಂತ ಬಿರಾದಾರ ಭಾಗವಹಿಸಲಿದ್ದಾರೆ. ರಾಷ್ಟ್ರಮಟ್ಟದ ಯೋಗ ಮಹೋತ್ಸವ ಇದಾಗಲಿದ್ದು, ಮಹಿಳೆಯರು, ಮಕ್ಕಳು, ಯುವಕರು, ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.
ಸೂರ್ಯ ಫೌಂಡೇಷನ್ ಸಂಯೋಜಕ ಗುರುನಾಥ ರಾಜಗೀರಾ ಮಾತನಾಡಿ, ವಾರದಿಂದ ಯೋಗ ಮಹೋತ್ಸವ ಯಶಸ್ಸಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಎಲ್ಲ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗಿದೆ. ೫೦೦ಕ್ಕೂ ಹೆಚ್ಚು ಜನರು ಯೋಗದಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿದ್ದು, ಸಂಖ್ಯೆ ಸಾವಿರ ದಾಟುವ ನಿರೀಕ್ಷೆ ಇದೆ. ಯೋಗದಲ್ಲಿ ಭಾಗವಹಿಸುವವರಿಗೆ ಕೇಂದ್ರ ಸರ್ಕಾರದಿಂದ ಪ್ರಮಾಣಪತ್ರ ಸಿಗಲಿದೆ ಎಂದು ತಿಳಿಸಿದರು.
ಅನುಭವ ಮಂಟಪ ಟ್ರಸ್ಟ್ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಶ್ರೀ ಡಾ.ಚನ್ನಬಸವ ಪಟ್ಟದ್ದೇವರು, ಕಾರ್ಯಕ್ರಮ ಸಂಯೋಜಕ ಈಶ್ವರ ರುಮ್ಮಾ, ಪ್ರಮುಖರಾದ ಗಣಪತಿ ಬಾವುಗೆ, ಕಲ್ಯಾಣರಾವ ಪಾಟೀಲ್, ಶ್ರೀಕಾಂತ ಬಿರಾದಾರ, ಶಿವಪುತ್ರ ದಾಬಶೆಟ್ಟೆ, ಸಂಗಮೇಶ ಬಿರಾದಾರ, ಬಸವರಾಜ ರಂಜೇರೆ, ಸಂಗಮೇಶ ಸಂಗಮದ, ಪ್ರವೀಣ ಹಿರೇಮಠ, ಸವಿತಾ ಭೂರೆ ಇದ್ದರು. ಬಾಬು ಬೆಲ್ದಾಳ ನಿರೂಪಣೆ ಮಾಡಿದರು.
ವ್ಯಕ್ತಿಯ ಉತ್ತಮ ಆರೋಗ್ಯಕ್ಕೆ ಯೋಗ ಪೂರಕವಾಗಿದೆ. ಇಂದಿನ ಯಾಂತ್ರಿಕ ಯುಗದಲ್ಲಿ ಎಲ್ಲರಲ್ಲಿ ದೈಹಿಕ ಶ್ರಮ ಕಡಿಮೆ ಆಗಿದೆ. ಹೀಗಾಗಿ ಎಲ್ಲರೂ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳುವುದು ಅತ್ಯಂತ ಜರೂರಿಯಾಗಿದೆ.
| ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷರು, ಅನುಭವ ಮಂಟಪ ಟ್ರಸ್ಟ್ ಬಸವಕಲ್ಯಾಣ
ನಮ್ಮಲ್ಲಿ ರಾಷ್ಟ್ರಮಟ್ಟದ ಯೋಗ ಮಹೋತ್ಸವ ನಡೆಯುತ್ತಿರುವುದು ಅತ್ಯಂತ ಹೆಮ್ಮೆ ವಿಷಯ. ಮಹೋತ್ಸವದಲ್ಲಿ ಸದ್ಭಕ್ತರು ಬಿಳಿ ಸಮವಸ್ತ್ರ ಧರಿಸಿ ಸರಿಯಾದ ಸಮಯಕ್ಕೆ ಆಗಮಿಸಿ ಶಿಸ್ತು ಕಾಪಾಡಬೇಕು.
| ಶ್ರೀ ಗುರುಬಸವ ಪಟ್ಟದ್ದೇವರು ಪೀಠಾಧಿಪತಿ, ಹಿರೇಮಠ ಸಂಸ್ಥಾನ ಭಾಲ್ಕಿ