ಧ್ಯಾನ, ಮುದ್ರೆಯೊಂದಿಗೆ ಯೋಗ ಮಹೋತ್ಸವ ಸಂಪನ್ನ

h28-Yog 3
Published on

ಹುಬ್ಬಳ್ಳಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಕನ್ನಡದ ನಂ. 1 ದಿನಪತ್ರಿಕೆ ‘ವಿಜಯವಾಣಿ‘ ಹಾಗೂ ‘ದಿಗ್ವಿಜಯ ನ್ಯೂಸ್’ ಸುದ್ದಿವಾಹಿನಿ ಮಾಧ್ಯಮ ಸಹಯೋಗದಲ್ಲಿ ಹಾರ್ಟ್​ಫುಲ್​ನೆಸ್ ಇನ್​ಸ್ಟಿಟ್ಯೂಟ್, ಶ್ರೀರಾಮ ಚಂದ್ರ ಮಿಷನ್, ಕೇಂದ್ರ ಸಂಸ್ಕೃತಿ ಸಚಿವಾಲಯ ವತಿಯಿಂದ ಇಲ್ಲಿನ ದೇಶಪಾಂಡೆ ನಗರದ ಕರ್ನಾಟಕ ಜಿಮ್ಾನಾ ಮೈದಾನದಲ್ಲಿ ಆಯೋಜಿಸಿದ್ದ ‘ಯೋಗ ಮಹೋತ್ಸವ’ವು ಭಾನುವಾರ ಸಂಪನ್ನಗೊಂಡಿತು. ಮೂರು ದಿನಗಳವರೆಗೆ ಜರುಗಿದ ಈ ಮಹೋತ್ಸವದಲ್ಲಿ ಸಾವಿರಾರು ಜನರು ಭಾಗವಹಿಸಿ, ಧ್ಯಾನ, ಮುದ್ರೆ ಹಾಗೂ ಯೋಗಾಸನಗಳನ್ನು ಮಾಡಿ ಖುಷಿಪಟ್ಟರು.

ಹಾರ್ಟ್​ಫುಲ್​ನೆಸ್ ಕೇಂದ್ರದ ವಲಯ ಸಂಚಾಲಕ ಅಜಿತ ಕಾಮತ್ ಅವರು ಪ್ರಾರ್ಥನೆ ಮಾಡುವ ವಿಧಾನವನ್ನು ತಿಳಿಸಿಕೊಟ್ಟರು. ಪ್ರಾರ್ಥನೆಯಿಂದ ಆಗುವ ಲಾಭ, ಪರಮಾತ್ಮನನೊಂದಿಗೆ ಸಮ್ಮಿಲನ, ಆಧ್ಯಾತ್ಮದ ಉತ್ತುಂಗತೆಗಳನ್ನು ವಿವರಿಸಿದ ಅವರು, ದೇವರಿಗೆ ರೂಪವಿಲ್ಲ. ಆದರೆ ಆತನ ದರ್ಶನದ ಅನುಭವ ಸಿಗುತ್ತದೆ. ದೇವರಿಗೆ ಶರಣಾಗದ ಹೊರತು ನಮಗೆ ಏನೇನೂ ಲಭಿಸುವುದಿಲ್ಲ. ಭಗವತ್ ಪ್ರಾಪ್ತಿಯಾಯಿತು ಎಂದರೆ ನಮ್ಮ ಜೀವನ ಆನಂದಮಯವಾಗಿರುತ್ತದೆ ಎಂದು ಹೇಳಿದರು.

ಪತಂಜಲಿ ಯೋಗ ಪೀಠದ ರಾಜ್ಯ ಉಸ್ತುವಾರಿ ಭವರಲಾಲ್ ಆರ್ಯ ಅವರು ಯೋಗಾಸನ ಆರಂಭಕ್ಕೆ ಮುನ್ನ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿದರು. ಸರಳ ಆಸನಗಳನ್ನು ಹೇಳಿಕೊಟ್ಟ ತರುವಾಯ, ಆರೋಗ್ಯ ವೃದ್ಧಿಗೆ ಅಗತ್ಯವಿರುವ ವಿವಿಧ ಆಸನಗಳನ್ನು ಪ್ರದರ್ಶಿಸಿ ಯೋಗಾಸಕ್ತರನ್ನು ಹುರಿದುಂಬಿಸಿದರು. ಹಾರ್ಟ್​ಫುಲ್​ನೆಸ್ ಹುಬ್ಬಳ್ಳಿ ಧ್ಯಾನ ಕೇಂದ್ರದ ಸಂಚಾಲಕ ಡಾ.ಬಿ.ಆರ್. ಬಾರಕೋಲ್, ಕೆಸಿಸಿಐ ಅಧ್ಯಕ್ಷ ವಿನಯ ಜವಳಿ, ಟೈ ಹುಬ್ಬಳ್ಳಿ ಶಾಖೆ ಮಾಜಿ ಅಧ್ಯಕ್ಷ ಶಶಿಧರ ಶೆಟ್ಟರ್, ಸಚಿನ ಮಹಾಜನ, ಇತರರಿದ್ದರು.

ನಿರೋಗಮಯ ಜೀವನ ಕ್ರಮಕ್ಕೆ ಮುದ್ರೆ ಅಗತ್ಯ

ಜೀವನ ನಿರೋಗಮಯವಾಗಿರಲು ಮುದ್ರೆಗಳನ್ನು ನಿತ್ಯವೂ ಚಾಚೂ ತಪ್ಪದೆ ಮಾಡಬೇಕು. ಆರೋಗ್ಯದ ರಹಸ್ಯ ಇರುವುದು ಮುದ್ರೆಗಳಲ್ಲಿ. ಇದರಲ್ಲಿ ಪ್ರಮುಖವಾದದು ಹಸ್ತಮುದ್ರೆ. ಯಾವ ಸಂದರ್ಭದಲ್ಲಿ ಯಾವ ಮುದ್ರೆ ಮಾಡಿದರೆ ಒಳಿತು ಎಂಬುದನ್ನು ಪ್ರತಿಯೊಬ್ಬರೂ ಅಮೂಲಾಗ್ರವಾಗಿ ತಿಳಿದುಕೊಂಡಿರಬೇಕು ಎಂದು ಹಾರ್ಟ್​ಫುಲ್​ನೆಸ್ ಧಾರವಾಡ ಸಂಚಾಲಕ ಶ್ರೀಧರ ಚಕ್ರವರ್ತಿ ಮಾಹಿತಿ ವಿನಿಮಯ ಮಾಡಿಕೊಂಡರು.

ಪಂಚಭೂತಗಳಿಂದ ನಿರ್ವಣವಾಗಿರುವ ದೇಹಕ್ಕೆ ಯಾವ ಸಂದರ್ಭದಲ್ಲಿ ಯಾವ ಆಹಾರ, ನೀರು, ಜೀವನ ಶೈಲಿ ಬೇಕು ಎಂಬುದನ್ನು ತಿಳಿದುಕೊಂಡಿರಬೇಕು. ಪ್ರಾಣಮಯ, ಮನೋಮಯ ಕೋಶಗಳನ್ನು ಅಧ್ಯಯನ ಮಾಡಿಕೊಂಡಿರಬೇಕು. ಶರೀರದಲ್ಲಿ ಸ್ವಲ್ಪ ಸಮತೋಲನ ತಪ್ಪಿದರೆ ಅನಾರೋಗ್ಯ ಬಾಧಿಸುತ್ತದೆ. ಹಾಗಾಗಿ ಸಮತೋಲಿತ ಜೀವನ ಶೈಲಿಯನ್ನು ಅಂತರ್ಗತ ಮಾಡಿಕೊಳ್ಳಬೇಕು. ಇದುವೇ ಜೀವನ ಎಂದು ಮುದ್ರೆಗಳ ಬಗ್ಗೆ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net