

ಹುಬ್ಬಳ್ಳಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ, ದಿಗ್ವಿಜಯ ನ್ಯೂಸ್ ಚಾನಲ್, ಹಾರ್ಟ್ಫುಲ್ನೆಸ್ ಇನ್ಸ್ಟಿಟ್ಯೂಟ್, ಶ್ರೀರಾಮ ಚಂದ್ರ ಮಿಷನ್, ಮಿನಿಸ್ಟ್ರಿ ಆಫ್ ಕಲ್ಚರ್ ವತಿಯಿಂದ ಇಲ್ಲಿನ ದೇಶಪಾಂಡೆ ನಗರದ ಕರ್ನಾಟಕ ಜಿಮ್ಾನಾ ಮೈದಾನದಲ್ಲಿ ಮೇ 26, 27, 28ರಂದು ಸಂಜೆ 5.30ರಿಂದ 7.30ರವರೆಗೆ ಯೋಗ ಮಹೋತ್ಸವ ಏರ್ಪಡಿಸಲಾಗಿದೆ. ಮೂರು ದಿನಗಳ ಈ ಮಹೋತ್ಸವದಲ್ಲಿ ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದು ಪತಂಜಲಿ ಯೋಗ ಪೀಠದ ರಾಜ್ಯ ಉಸ್ತುವಾರಿ ಭವರಲಾಲ್ ಆರ್ಯ ಅವರು ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಸಿದ್ಧತಾ ಮಹೋತ್ಸವ ಇದು. ಕೆಲವು ಆಸನ, ಪ್ರಾಣಾಯಾಮಗಳನ್ನು ಹೇಳಿಕೊಡಲಾಗುವುದು. ಪತಂಜಲಿ ಮಹರ್ಷಿಗಳು ತಿಳಿಸಿಕೊಟ್ಟ ಅಷ್ಟಾಂಗ ಯೋಗ, ಸೂತ್ರಗಳನ್ನು ಪರಿಚಯ ಮಾಡಿಕೊಡಲಾಗುವುದು. ಎಲ್ಲರೂ ಯೋಗ ಮಾಡಬೇಕು. ಯೋಗವನ್ನು ಮೊದಲು ಅಧ್ಯಯನ ಮಾಡಬೇಕು. ನಂತರ ಅಭ್ಯಾಸ, ಆಚರಣೆಯತ್ತ ವಾಲಬೇಕು ಎಂದರು.
ಹಾರ್ಟ್ಫುಲ್ನೆಸ್ ಹುಬ್ಬಳ್ಳಿ ಧ್ಯಾನ ಕೇಂದ್ರದ ಸಂಚಾಲಕ ಡಾ.ಬಿ.ಆರ್. ಬಾರಕೋಲ್ ಹಾಗೂ ವಲಯ ಸಂಚಾಲಕ ಅಜಿತ್ ಕಾಮತ್ ಮಾತನಾಡಿ, ಆಸನಗಳು, ಪ್ರಾಣಾಯಾಮ, ಮುದ್ರಾ ಮತ್ತು ಯೋಗಿಕ್ಪ್ರಾಣಾಹುತಿ ಆಧಾರಿತ ಧ್ಯಾನ ತರಬೇತಿ ನೀಡಲಾಗುವುದು. ಮೊದಲ ದಿನ ಧ್ಯಾನ, ಎರಡನೇ ದಿನ ಶುದ್ಧೀಕರಣ, ಮೂರನೇ ದಿನ ಪ್ರಾರ್ಥನೆಯನ್ನು ಹೇಳಿಕೊಡಲಾಗುವುದು. ‘ಹರ್ ದಿಲ್ ಧ್ಯಾನ್, ಹರ್ ದಿನ್ ಧ್ಯಾನ್’ ಅಭಿಯಾನದಡಿ ಈ ತರಬೇತಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮೇ 26ರಂದು ಯೋಗ ಆರಂಭಕ್ಕೆ ಮುನ್ನ ದಿ ವಿಸ್ಡಂ ಬ್ರಿಡ್ಸ್ ಕೃತಿ ಮರು ಲೋಕಾರ್ಪಣೆಯಾಗಲಿದೆ. ಮೇ 27ರಂದು ಬ್ರೖೆಟರ್ ಮೈಂಡ್ಸ್ ಡೆಮೋ, 5ರಿಂದ 15 ವಯಸ್ಸಿನ ಮಕ್ಕಳಿಗೆ ಕೌಶಲಾಭಿವೃದ್ಧಿ ತರಬೇತಿ ನೀಡಲಾಗುವುದು ಎಂದರು.
ಸಚಿನ್ ಮಹಾಜನ್ ಸುದ್ದಿಗೋಷ್ಠಿಯಲ್ಲಿದ್ದರು.