ಯೋಗದಿಂದ ರೋಗ ದೂರ

h21-Yog Patanjali 6
Published on

ಹುಬ್ಬಳ್ಳಿ: ನಿತ್ಯವೂ ನಾವು ಯೋಗಾಸನಗಳನ್ನು ಮೈಗೂಡಿಸಿಕೊಂಡರೆ, ಯಾವುದೇ ರೋಗಗಳು ನಮ್ಮ ಬಳಿ ಸುಳಿಯುವುದಿಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಅಭಿಪ್ರಾಯಪಟ್ಟರು.

ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ, ದಿಗ್ವಿಜಯ ಸುದ್ದಿವಾಹಿನಿ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ಎಸ್​ಪಿವೈಎಸ್​ಎಸ್), ಯೋಗ ಸ್ಪರ್ಶ ಪ್ರತಿಷ್ಠಾನ ವತಿಯಿಂದ ನಗರದ ಇಂದಿರಾ ಗಾಜಿನ ಮನೆ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಋಷಿ-ಮುನಿಗಳ ಯೋಗದ ಪರಿಕಲ್ಪನೆಯನ್ನು ಜಗತ್ತಿಗೆ ಪಸರಿಸಿದವರು ಪ್ರಧಾನಿ ನರೇಂದ್ರ ಮೋದಿ ಅವರು. ಯೋಗದಿಂದ ನಮ್ಮ ಜೀವನದಲ್ಲಿ ಸಂಸ್ಕಾರ, ಆರೋಗ್ಯ ವೃದ್ಧಿಯಾಗುತ್ತದೆ. ಒತ್ತಡದ ಜೀವನದಲ್ಲಿ ಯೋಗವನ್ನು ಮೈಗೂಡಿಸಿಕೊಳ್ಳಬೇಕು. ಒಂದು ತಾಸು ಯೋಗಾಸನಗಳನ್ನು ಮಾಡಿದರೆ, ಇಡೀ ದಿನವೂ ನಾವೆಲ್ಲ ಲವಲವಿಕೆಯಿಂದ ಇರಬಹುದು ಎಂದರು.

ಡಾ. ಚೇತನ ಜಾಯದೆ ಮಾತನಾಡಿ, ಸೃಷ್ಟಿ, ಶಿಕ್ಷಣ, ರಕ್ಷಣೆ, ಚಿಕಿತ್ಸೆ ಹಾಗೂ ಆಧ್ಯಾತ್ಮಿಕ ದೃಷ್ಟಿಕೋನವನ್ನು ಯೋಗ ಹೊಂದಿದೆ. ನಮ್ಮ ಅಜ್ಜ ಕೂಡ ನಿತ್ಯವೂ ಯೋಗ ಮಾಡುತ್ತಿದ್ದರು. ಅದನ್ನು ನಾವು ಕಲಿತೆವು. ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡರೆ ಯಾವುದೇ ರೋಗಗಳು ಬಾಧಿಸುವುದಿಲ್ಲ ಎಂದರು.

‘ವಿಜಯವಾಣಿ’ ಹುಬ್ಬಳ್ಳಿ ಆವೃತ್ತಿ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್ ಮಾತನಾಡಿ, ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಪ್ರಾಪರ್ಟಿ ಎಕ್ಸ್​ಪೋ, ಗಣೇಶೋತ್ಸವ, ಹುಬ್ಬಳ್ಳಿ ಯುಗಾದಿ ಉತ್ಸವ, ಮಹಿಳಾ ದಿನಾಚರಣೆ, ಪುಠಾಣಿ ಪ್ರಪಂಚ, ನಮ್ಮ ಎತ್ತು ನಮ್ಮ ಹೆಮ್ಮೆಯಂತಹ ಜನಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಜನರಿಗೆ ಹತ್ತಿರವಾಗುತ್ತಿದೆ. ಅಷ್ಟೇ ಅಲ್ಲ ಆರೋಗ್ಯ ಕಾಯ್ದುಕೊಳ್ಳುವ ದೃಷ್ಟಿಯಿಂದ ಯೋಗಕ್ಕೂ ಒತ್ತು ನೀಡಿದೆ. ಮೊಟ್ಟ ಮೊದಲು ಯೋಗ ಗುರು ರಾಮದೇವ ಬಾಬಾ ಅವರನ್ನು ಹುಬ್ಬಳ್ಳಿಗೆ ಕರೆಯಿಸಿ ದೊಡ್ಡ ಪ್ರಮಾಣದಲ್ಲಿ ವಿಶ್ವ ಯೋಗ ದಿನ ಕಾರ್ಯಕ್ರಮ ಆಯೋಜಿಸಿದ ಶ್ರೇಯಸ್ಸು ವಿಜಯವಾಣಿ-ದಿಗ್ವಿಜಯ ನ್ಯೂಸ್​ನದ್ದು ಎಂದರು.

ವ್ಯಾಪಾರಿ ವಿಶ್ವನಾಥ ಗುಡ್ಡದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್​ಪಿವೈಎಸ್​ಎಸ್ ಜಿಲ್ಲಾ ಸಂಚಾಲಕಿ ಸ್ನೇಹಾ ಬಾಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಗ ಸ್ಪರ್ಶ ಪ್ರತಿಷ್ಠಾನದ ಅಧ್ಯಕ್ಷ ದಯಾನಂದ ಮಗಜಿಕೊಂಡಿ, ಕಾರ್ಯಕ್ರಮ ಸಂಚಾಲಕ ಪ್ರಕಾಶ ಮುನವಳ್ಳಿ, ಸಂಚಾಲಕಿ ಶಕುಂತಲಾ ಮುಗಳಿ, ಗೋಪಾಲ ಜೋಶಿ, ಅಮರಾವತಿ ಗಾಣಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net