ಮೈಸೂರು ಅರಮನೆಯಲ್ಲಿ ಮೇಳೈಸಿದ ಯೋಗ ಕಲರವ

mysore
Published on

ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆ ಅಂಗಳದಲ್ಲಿ ಯೋಗ ವೈಭವ ಅನಾವರಣಗೊಂಡಿತು.


ಜಿಲ್ಲಾಡಳಿತ, ಅರಮನೆ ಆಡಳಿತ ಮಂಡಳಿ, ಆಯುಷ್ ಇಲಾಖೆ ಹಾಗೂ ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಹಸ್ರಾರು ಜನರು ಸಾಕ್ಷಿಯಾದರು. ಯೋಗಾಸಕ್ತರು, ವಿದ್ಯಾರ್ಥಿಗಳು ಯೋಗದ ವಿವಿಧ ಆಸನಗಳನ್ನು ಮಾಡಿ ಯೋಗ ಸಡಗರದಲ್ಲಿ ಮಿಂದೆದ್ದರು. ಇದರೊಂದಿಗೆ ಯೋಗ ಕಲರವವೂ ಮೇಳೈಸಿತು.


ಸೂರ್ಯೋದಯಕ್ಕೂ ಮುನ್ನವೇ ಯೋಗಾಸಕ್ತರು ಅರಮನೆ ಆವರಣದಲ್ಲಿ ಸಮಾವೇಶಗೊಂಡಿದ್ದರು. 6.30ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. 7.30ರಿಂದ ಆರಂಭವಾದ ಸಾಮೂಹಿಕ ಯೋಗಾಭ್ಯಾಸ 45 ನಿಮಿಷ ನಡೆಯಿತು.

ಯೋಗಗುರು ಪಿ.ಎನ್.ಗಣೇಶ್‌ಕುಮಾರ್ ಅವರು ಶಂಖನಾದ ಮೊಳಗಿಸಿ ಸಾಮೂಹಿಕ ಯೋಗಾಭ್ಯಾಸ ಪ್ರಾರಂಭಿಸಿದರು. ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಆಶಾ ಮತ್ತು ತಂಡದವರು ಪ್ರಾರ್ಥನೆ ಮಾಡಿದರು. ಆಯುಷ್ ಇಲಾಖೆಯ ಶ್ರೀನಿವಾಸನಾಯ್ಡು ಅವರು 4 ನಿಮಿಷಗಳ ಚಾಲನ ಕ್ರಿಯೆ ಹಾಗೂ 25 ನಿಮಿಷಗಳ ಯೋಗಾಭ್ಯಾಸ ನಿರೂಪಿಸಿದರು. ದೇಹದ ಅಂಗಗಳಿಗೆ ಆಗುವ ಅನುಕೂಲವನ್ನೂ ವಿವರಿಸಿದರು. ಯೋಗಾಭ್ಯಾಸಿಗಳು ಆ ಕ್ರಮವನ್ನು ಅನುಸರಿಸಿದರು.


ಬಳಿಕ ಯೋಗದ ವಿವಿಧ ಆಸನಗಳು ಒಂದೊಂದಾಗಿ ಗರಿಬಿಚ್ಚಿದವು. ಮೊದಲು ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ಸಮದಂಡಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಶಶಂಕಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಸರಳ ಭುಜಂಗಾಸನ, ಭುಜಂಗಾಸನ, ಶಲಭಾಸನ, ಸೇತು ಬಂಧಾಸನ, ಉತ್ಥಾನ ಪಾದಾಸನ, ಅರ್ಧ ಹಲಾಸನ, ಪವನ ಮುಕ್ತಾಸನ, ಶವಾಸನವನ್ನು ಸಹಸ್ರಾರು ಜನರು ಸಾಮೂಹಿಕವಾಗಿ ಮಾಡಿ ಗಮನ ಸೆಳೆದರು.

ಭಾರತ್ ಸ್ವಾಭಿಮಾನಿ ಟ್ರಸ್ಟ್‌ನ ಕಾಚಂನಗಂಗಾ, ಮೈಸೂರು ಯೋಗ ಒಕ್ಕೂಟದ ಬಿ.ಪಿ.ಮೂರ್ತಿ, ಯುವಶಕ್ತಿ ಪ್ರತಿಷ್ಠಾನದ ಪ್ರೇಮ್ ಕುಮಾರ್ 14 ನಿಮಿಷ ಪ್ರಾಣಾಯಾಮ, ಧ್ಯಾನ, ಸಂಕಲ್ಪ ಬೋಧಿಸಿದರು. ಜೆಎಸ್‌ಎಸ್ ಆಯುರ್ವೇದ ವೈದ್ಯಕೀಯ ಕಾಲೇಜು ತಂಡದ ಶಾಂತಿ ಮಂತ್ರದೊಂದಿಗೆ ಯೋಗ ದಿನಾಚರಣೆ ಸಂಪನ್ನಗೊಂಡಿತು.

ಯೋಗಪಟುಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಎಂಎಲ್‌ಸಿ ಸಿ.ಎನ್.ಮಂಜೇಗೌಡ ಆಸನಗಳನ್ನು ಮಾಡಿದರು. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಅರ್ಧಕ್ಕೆ ಮೊಟಕುಗೊಳಿಸಿ ವೇದಿಕೆಯಿಂದ ಇಳಿದು ನಿರ್ಗಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net