ಭಾರತ ವಿಶ್ವ ಗುರುವಾಗಲು ಯೋಗ ಕಾರಣ: ಸಂಸ್ಕೃತ ವಿದ್ವಾಂಸಕ ಎಚ್.ವಿ.ನಾಗರಾಜರಾವ್ ಬಣ್ಣನೆ

7
Published on

ಮೈಸೂರು: ಯೋಗ ಭಾರತದಲ್ಲಿ ಹುಟ್ಟಿ ಇಂದು ವಿಶ್ವವ್ಯಾಪಿ ಹರಡಿಕೊಂಡಿದೆ. ಯೋಗದ ಕಾರಣದಿಂದ ಭಾರತ ಇಂದು ವಿಶ್ವ ಗುರುವಾಗಿದೆ ಎಂದು ಸಂಸ್ಕೃತ ವಿದ್ವಾಂಸಕ ಎಚ್.ವಿ.ನಾಗರಾಜರಾವ್ ಬಣ್ಣಿಸಿದರು.

ನಗರದ ಬಸವಮಾರ್ಗ ಫೌಂಡೇಷನ್‌ನಿಂದ ಭಾನುವಾರ ಆಯೋಜಿಸಿದ್ದ 21 ದಿನಗಳ ಪ್ರಥಮ ಯೋಗ ಮತ್ತು 47ನೇ ಕುಡಿತ ಬಿಡಿಸುವ ಶಿಬಿರದ ಸಮಾರೋಪ ಸಮಾರಂಭ ಹಾಗೂ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯೋಗ ಭಾರತದಲ್ಲಿ ಹುಟ್ಟಿ ಇಂದು ವಿಶ್ವವ್ಯಾಪಿ ಹರಡಿಕೊಂಡಿದೆ. ವಿಶ್ವಕ್ಕೆ ಭಾರತ ಕೊಟ್ಟ ಅತಿ ದೊಡ್ಡ ಕೊಡುಗೆಯಲ್ಲಿ ಯೋಗ ಅಗ್ರ ಸ್ಥಾನದಲ್ಲಿ ಇದೆ. ಯೋಗ ಎಂದರೆ ಕೇವಲ ಆಸನ ಮಾತ್ರವಲ್ಲ. ಜೀವನದ ನಿಜವಾದ ಸಾರ ಯೋಗದಲ್ಲಿ ಅಡಗಿದೆ. ಯೋಗಿಗಳು ಮೊದಲು ಯೋಗದ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮನುಷ್ಯನ ಸಾಧನೆಗೆ ದೊಡ್ಡ ಅಡ್ಡಿ ಎಂದರೆ ಅದು ವ್ಯಸನ. ಚಟಗಳಿಗೆ ಬಲಿಯಾದರೆ ಅದು ಜೀವನವೇ ಅಲ್ಲ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದರೆ ಮೊದಲು ವ್ಯಸನಗಳಿಂದ ಹೊರ ಬರಬೇಕು. ಮನಸ್ಸಿನಲ್ಲಿ ದೃಢ ಸಂಕಲ್ಪ ಮಾಡಿಕೊಂಡು ಈ ದಾಸ್ಯದಿಂದ ಹೊರಬರಬೇಕು. ಚಟದಿಂದ ದೂರವಾದರೆ ಯಾವುದಾದರೂ ಸಾಧನೆ ಮಾಡಬಹುದು. ಅದಕ್ಕೆ ನಿರಂತರ ಪ್ರಯತ್ನ ಬೇಕು. ಸಾಧಕರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಉತ್ತಮ ಪ್ರಜೆಯಾಗಿ ಬಾಳಬೇಕು ಎಂದು ಮಾರ್ಗದರ್ಶನ ಮಾಡಿದರು.

ಬಸವಮಾರ್ಗ ಸಂಸ್ಥೆಯ ಸಂಸ್ಥಾಪಕ ಬಸವಣ್ಣ ಮಾತನಾಡಿ, 48ನೇ ಕುಡಿತ ಬಿಡಿಸುವ ಶಿಬಿರದಲ್ಲಿ 21 ದಿನಗಳ ಮೊದಲ ಯೋಗ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರ ಸಂಪೂರ್ಣ ಯಶಸ್ವಿಯಾಗಿದೆ. ವ್ಯಸನಿಗಳ ಮನಃ ಪರಿವರ್ತನೆಗೆ ಸಂಸ್ಥೆಯಲ್ಲಿ ಯೋಗವನ್ನು ಒಂದು ಭಾಗವನ್ನಾಗಿ ಕಲಿಸಲಾಗುತ್ತಿದೆ. ವ್ಯಸನಮುಕ್ತ ಕೇಂದ್ರವನ್ನು ಆಶ್ರಮ ಮತ್ತು ಗುರುಕುಲದ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. 21 ದಿನಗಳ ಈ ಶಿಬಿರದಲ್ಲಿ ಯೋಗವನ್ನು ಗುಣಮಟ್ಟದಲ್ಲಿ ನೀಡಲಾಗಿದೆ. ಇದರಿಂದ ವ್ಯಸನಿಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಬಸವಮಾರ್ಗ ಫೌಂಡೇಷನ್ ಇದುವರೆಗೆ 10 ಸಾವಿರಕ್ಕೂ ಹೆಚ್ಚು ವ್ಯಸನಿಗಳು ಚಿಕಿತ್ಸೆ ಪಡೆದು ಹೊರ ಹೋಗಿದ್ದಾರೆ. ಅವರೆಲ್ಲ ಇಂದು ಕುಡಿತದಿಂದ ಹೊರ ಬಂದು ಉತ್ತಮ ಜೀವನ ಸಾಗಿಸುತ್ತಿದ್ದಾರೆ. ಅವರಂತೆ ನೀವೂ ಆಗಬೇಕು. ವ್ಯಸನದಿಂದ ಹೊರಬಂದು ಕುಟುಂಬ ಹಾಗೂ ಸಮಾಜಕ್ಕೆ ನೀವೆಲ್ಲ ಉತ್ತಮ ಪ್ರಜೆಯಾಗಿ ಬಾಳಬೇಕು. ಇಲ್ಲಿಂದ ಮನೆಗೆ ತೆರಳಿದ ಮೇಲೆ ಇಲ್ಲಿ ಹೇಳಿಕೊಟ್ಟ ಯೋಗವನ್ನು ನಿತ್ಯ ಅನುಸರಿಸಬೇಕು ಎಂದು ಹೇಳಿದರು.

ಯೋಗ ಶಿಕ್ಷಕ ಎಚ್.ಪಿ.ನವೀನ್‌ಕುಮಾರ್, ವ್ಯವಸ್ಥಾಪಕರಾದ ಬಾಲಸುಬ್ರಹ್ಮಣ್ಯಂ, ಸಂಜಯ್ ಇತರರು ಇದ್ದರು. ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಯೋಗ ಪ್ರಮಾಣ ಪತ್ರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net