

ಎಚ್.ಡಿ.ಕೋಟೆ: ರೋಗಮುಕ್ತ ಸಮಾಜಕ್ಕೆ ಯೋಗವೇ ಮದ್ದು ಎಂದು ಪ್ರಾಂಶುಪಾಲ ಪ್ರೊ.ಎಚ್.ಆರ್.ಅರುಣ್ಕುಮಾರ್ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿದಿನ ಯೋಗಾಭ್ಯಾಸದ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವುದರಿಂದ ರೋಗಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಭಾರತೀಯ ಸಂಸ್ಕೃತಿಯ ಭಾಗವಾಗಿರುವ ಯೋಗ ಇಂದು ವಿಶ್ವಮಾನ್ಯವಾಗಿದೆ. ದೇಶ-ವಿದೇಶಗಳಲ್ಲಿ ಸಾಮೂಹಿಕವಾಗಿ ಮತ್ತು ಸಾರ್ವಜನಿಕವಾಗಿ ಯೋಗ ಪ್ರದರ್ಶನ ಮಾಡುತ್ತಿದ್ದಾರೆ. ಆಧುನಿಕ ಜೀವನಶೈಲಿಯಿಂದ ಬೊಜ್ಜು, ಅಧಿಕ ರಕ್ತದೊತ್ತಡ, ಸಕ್ಕರೆ, ಕಿಡ್ನಿ, ಲಿವರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಬರುತ್ತಿವೆ. ಈ ಹಿಂದೆ ಈ ಕಾಯಿಲೆಗಳನ್ನು ನಗರಗಳಲ್ಲಿ ವಾಸ ಮಾಡುವ ಶ್ರೀಮಂತರ ಕಾಯಿಲೆಗಳೆಂದು ಕರೆಯುತ್ತಿದ್ದರು. ಆದರೆ ಇಂದು ನಗರ ಮತ್ತು ಗ್ರಾಮೀಣ ಪ್ರದೇಶ ಅಥವಾ ಬಡವ-ಬಲ್ಲಿದ ಎಂಬ ಭೇದ-ಭಾವ ಇಲ್ಲದೆ ಎಲ್ಲ ಜನರಲ್ಲೂ ಮುಖ್ಯವಾಗಿ ಯುವಕರಲ್ಲಿ ಹೆಚ್ಚಾಗಿ ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರೋಗದಿಂದ ಹೊರಬರಬೇಕಾದರೆ ಪ್ರತಿದಿನ ಯೋಗ ಮಾಡಬೇಕು. ಇತ್ತೀಚಿಗೆ ಸಮಾಜದಲ್ಲಿ ಅಶಾಂತಿ ಹೆಚ್ಚಾಗುತ್ತಿದೆ. ಹೊಡೆದಾಟ ಮತ್ತು ಬಡಿದಾಟಗಳು ಕೊಲೆಯಲ್ಲಿ ಅಂತ್ಯವಾಗುತ್ತಿದೆ. ವಿಚ್ಛೇದನ, ಅತ್ಯಾಚಾರ ದಿನನಿತ್ಯದ ಸುದ್ದಿಗಳಾಗುತ್ತಿವೆ. ನಮ್ಮ ಸಮಾಜದಲ್ಲಿ ಮನಃಶಾಂತಿ ಇಲ್ಲವಾಗಿದೆ. ಸಮಾಜದ ಶಾಂತಿ, ನೆಮ್ಮದಿ ಮತ್ತು ಸಹಬಾಳ್ವೆಗೆ ಧ್ಯಾನ ಅತ್ಯವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರಸ್ತುತದ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ಗೆ ದಾಸರಾಗಿದ್ದಾರೆ. ಇದರಿಂದಾಗಿ ಓದು-ಬರಹದಲ್ಲಿ ಹಿಂದೆ ಬಿದ್ದಿದೆ. ಹೀಗಾಗಿ ವಿದ್ಯಾರ್ಥಿಗಳು ಯೋಗ ಮತ್ತು ಧ್ಯಾನ ಮಾಡುವುದರ ಜತೆಗೆ ಆರೋಗ್ಯಕರ ಜೀವನಶೈಲಿಯಿಂದ ದೃಢಕಾಯರಾಗಿ ಭವಿಷ್ಯದಲ್ಲಿ ಉತ್ತಮ ಸಮಾಜ ಕಟ್ಟುವುದರ ಮೂಲಕ 2047ರ ಹೊತ್ತಿಗೆ ಬಲಿಷ್ಠ ಮತ್ತು ವಿಕಸಿತ ಭಾರತ ನಿರ್ಮಾಣ ಮಾಡಬಹುದು ಎಂದು ತಿಳಿಸಿದರು.
ವಿಶ್ವ ಯೋಗ ದಿನಾಚರಣೆಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಜೆ.ಪುಟ್ಟರಾಜು, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಗುರುದತ್ ಕಾಮತ್, ಕಚೇರಿ ಅಧೀಕ್ಷಕ ಬಾಲಾಜಿ, ಗ್ರಂಥಪಾಲಕಿ ಕಾತ್ಯಾಯಿನಿ, ಸಿಬ್ಬಂದಿ ರವಿಕುಮಾರ್, ಸಿದ್ದರಾಜು, ಪದ್ಮಮ್ಮ, ವಿದ್ಯಾ, ಕಾಲೇಜಿನ ವಿದ್ಯಾರ್ಥಿಗಳು ಇರಿದ್ದರು.