ಒತ್ತಡ ನಿವಾರಣೆ, ಉತ್ತಮ ಆರೋಗ್ಯಕ್ಕೆ ಯೋಗ ಸಹಕಾರಿ

8 ckm 1
ಚಿಕ್ಕಮಗಳೂರಲ್ಲಿ ಏರ್ಪಡಿಸಿದ್ದ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಯೋಗೋತ್ಸವ ತರಬೇತಿ ಕಾರ್ಯಕ್ರಮವನ್ನು ಮಂಗಳಾ ತಮ್ಮಯ್ಯ ಉದ್ಘಾಟಿಸಿದರು. ನಾರಾಯಣ ಪೂಜಾರ್, ಗಿರೀಶ್, ಡಾ.ಭಾಸ್ಕರ್ ಇದ್ದರು.
Published on

ಚಿಕ್ಕಮಗಳೂರು: ಶಾರೀರಿಕ ಹಾಗೂ ಮಾನಸಿಕ ಒತ್ತಡ ನಿವಾರಣೆಗೆ ಯೋಗ ಸಹಕಾರಿ. ದಿನದ ಕೆಲವು ಸಮಯ ಯೋಗಕ್ಕೆ ನೀಡಿದರೆ ಉತ್ತಮ ಆರೋಗ್ಯ ಪಡೆಯಬಹುದು ಎಂದು ಮಂಗಳಾ ಎಚ್.ಡಿ.ತಮ್ಮಯ್ಯ ಹೇಳಿದರು.
ಬಸವನಹಳ್ಳಿ ಸಮೀಪದ ಬ್ರಹ್ಮಾಕುಮಾರೀಸ್ ಸಂಸ್ಥೆಯಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ ಆಯುಷ್ ಇಲಾಖೆ ಹಾಗೂ ವಿಶ್ವ ಯೋಗ ದಿನಾಚರಣಾ ಸಮಿತಿ ಸಹಯೋಗದಲ್ಲಿ ಏರ್ಪಡಿಸಿದ್ದ 10ನೇ ಅಂತರಾಷ್ಟ್ರೀ ಯ ಯೋಗ ದಿನಾಚರಣೆ ಪ್ರಯುಕ್ತ ಯೋಗೋತ್ಸವ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ಆಹಾರ ಪದ್ಧತಿ, ಒತ್ತಡದ ಜೀವನ ಮನುಷ್ಯನ ಆರೋಗ್ಯ ಹದಗೆಡಿಸುತ್ತಿದೆ. ವ್ಯಾಯಾಮದ ಆಸಕ್ತಿ ಹೊಂದಿರದ ಮಾನವರು ಅನಾರೋಗ್ಯವನ್ನು ಬರಮಾಡಿಕೊಳ್ಳುತ್ತಾರೆ. ಅನಾರೋಗ್ಯದಿಂದ ಮುಕ್ತರಾಗಲು ಯೋಗಾಭ್ಯಾಸ ಮುಖ್ಯ. ಕೆಲವು ಗಂಟೆಗ ಯೋಗಾಸಾನದಲ್ಲಿ ತೊಡಗಿಸಿಕೊಂಡರೆ ನೆಮ್ಮದಿ ಜೀವನ ಪಡೆಯಬಹುದು ಎಂದರು.
ಯೋಗಾಸನವನ್ನು ಬದುಕಿನ ಭಾಗವಾಗಿ ಅಳವಡಿಸಿಕೊಂಡವರು ಆರೋಗ್ಯಯುತ ಶರೀರ ಹೊಂದುವ ಜತೆಗೆ ಆಯುಷ್ಯ ವೃದ್ಧಿಸಿಕೊಂಡಿರುವ ಅನೇಕ ಉದಾಹರಣೆಗಳಿವೆ. ಹೀಗಾಗಿ ಪ್ರತಿಯೊಬ್ಬರು ಯೋಗಾಭ್ಯಾಸದ ಪ್ರಮುಖ ಆಸನಗಳನ್ನು ಅಭ್ಯಾಸಿಸುವ ಮೂಲಕ ನಿರೋಗಿಯಾಗಿ ಬದುಕಲು ಮುಂದಾಗಬೇಕು ಎಂದರು.
ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ಡಾ. ಎಸ್.ಗೀತಾ ಮಾತನಾಡಿ, ಅಂಗನವಾಡಿ ಕಾರ್ಯಕರ್ತರಿಗೆ, ಸ್ವಸಹಾಯ ಸಂಘದ ಸದಸ್ಯರಿಗೆ ನಿಗದಿಪಡಿಸಿದ ಒಂದು ದಿನ ಏಕಕಾಲದಲ್ಲಿ ಯೋಗಾಭ್ಯಾಸದ ಜೀವನ ಶೈಲಿ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ ಆಯೋಜಿಸಿದೆ. ಇಲಾಖೆಯಿಂದ ಯೋಗ ಶಿಕ್ಷಕರ, ಆಯಷ್ ತಜ್ಞರ ನಿಯೋಜನೆ, ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಪ್ರಮಾಣಪತ್ರ ಸೇರಿದಂತೆ ಅನೇಕ ಸೌಲಭ್ಯ ಒದಗಿಸಲಾಗಿದೆ ಎಂದು ಹೇಳಿದರು.
ಬ್ರಹ್ಮಕುಮಾರೀಸ್ ಸಂಸ್ಥೆ ಜಿಲ್ಲಾ ಸಂಚಾಲಕಿ ಭಾಗ್ಯ, ದೇಹದಲ್ಲಿನ ರಕ್ತ ಸಂಚಲನ, ಬೆನ್ನು ನೋವು, ಬೊಜ್ಜು ಕರಗುವಿಕೆ, ದೇಹದ ಆಯಾಸ ತಗ್ಗುವಿಕೆ ಸೇರಿದಂತೆ ನಾನಾ ರೀತಿಯ ಯೋಗಾಸನಗಳು ಹಾಗೂ ಪ್ರಾಣಾಯಾಮ ತರಬೇತಿ ನೀಡಲಾಗುತ್ತಿದೆ. ಇದರಿಂದ ಆರೋಗ್ಯಕ್ಕೆ ಹೆಚ್ಚಿನ ಉಪಯೋಗವಾಗುತ್ತಿದೆ ಎಂದು ತಿಳಿಸಿದರು.
ಯೋಗಪಟುಗಳಾದ ನಾರಾಯಣ ಪೂಜಾರ್, ಗಿರೀಶ್, ಡಾ.ಭಾಸ್ಕರ್, ಪವಿತ್ರ, ವಿಜಯ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net