

ಕಡೂರು: ಯೋಗ ವಿದ್ಯೆ, ವಿಶ್ವಕ್ಕೆ ಭಾರತದ ಸನಾತನ ಪರಂಪರೆಯ ಕೊಡುಗೆಯಾಗಿದ್ದು, ಆರೋಗ್ಯದ ಬದುಕಿಗೆ ಯೋಗ ಹೆಚ್ಚು ಸಹಕಾರಿಯಾಗಲಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ರಾಜ್ಯ ಅಮೆಚೂರ್ ಯೋಗ ಸ್ಪೋಟ್ಸ್ ಅಸೋಸಿಯೇಷನ್ ಹಾಗೂ ಕಡೂರಿನ ರಾಘವೇಂದ್ರ ಯೋಗ ಶಿಕ್ಷಣ ಕೇಂದ್ರದ ಸಹಯೋಗದಲ್ಲಿ ತಾಲೂಕಿನ ಮಚ್ಚೇರಿಯ ಬೆಂಕಿ ಲಕ್ಷ್ಮಯ್ಯ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಎರಡು ದಿನಗಳ ರಾಜ್ಯ ಯೋಗಾಸನ ಚಾಂಪಿಯನ್ ಶಿಪ್-2024 ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯೋಗದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಕಡೂರಿನ ನಿವಾಸಿಗಳಿಗೆ ಯೋಗ ವಿದ್ಯೆಯ ಮಹತ್ವ ತಿಳಿಸಿಕೊಟ್ಟು ತರಬೇತಿ ನೀಡುತ್ತಿರುವ ರಾಘವೇಂದ್ರ ಯೋಗ ಶಿಕ್ಷಣ ಕೇಂದ್ರದ ಕಾರ್ಯ ಶ್ಲಾಘನೀಯ ಎಂದರು.
ಶಾಸಕರ ಸಹಕಾರದೊಂದಿಗೆ ಕಡೂರು ಪುರಸಭೆಯ ಎಲ್ಲ ಸದಸ್ಯರ ವಿಶ್ವಾಸ ಪಡೆದು ಪಟ್ಟಣದಲ್ಲಿ ಸುಸಜ್ಜಿತ ಯೋಗ ಮಂದಿರದ ನಿರ್ಮಾಣಕ್ಕೆ ಈಗಾಗಲೇ ನಿವೇಶನ ಒದಗಿಸಿಕೊಟ್ಟು ಪುರಸಭೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು 7.50 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ ಎಂದರು.
ಕರ್ನಾಟಕ ಅಮೆಚೂರ್‌ಯೋಗ ಸಂಸ್ಥೆ ಅಧ್ಯಕ್ಷ ಜಿ.ಎನ್.ಕೃಷ್ಣಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 1976ರಲ್ಲಿ ಆರಂಭವಾದ ಈ ಸಂಸ್ಥೆ ಸಾವಿರಾರು ಯೋಗಪಟುಗಳನ್ನು ರೂಪಿಸಿದೆ. ಈ ರೀತಿಯ ಪಂದ್ಯಾವಳಿಗಳಿಂದ ಯೋಗಪಟುಗಳ ಅದ್ಭುತ ಪ್ರತಿಭೆ ಅನಾವರಣಗೊಳ್ಳುತ್ತದೆ. ಮುಂದಿನ ಪೀಳಿಗೆಗೂ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅತಿಅವಶ್ಯಕವಾಗಲಿದೆ ಎಂದರು.
ರಾಜ್ಯದ 20 ಜಿಲ್ಲೆಗಳಿಂದ ಸುಮಾರು 800ಕ್ಕೂ ಹೆಚ್ಚಿನ ಯೋಗಪಟುಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ್ದರು. ರೋಟರಿ ಸಂಸ್ಥೆ ಅಧ್ಯಕ್ಷ ಟಿ.ಡಿ.ರಾಜನ್, ರಾಘವೇಂದ್ರ ಯೋಗ ಸಂಸ್ಥೆ ಅಧ್ಯಕ್ಷ ನರೇಂದ್ರನಾಥ್, ಉಪಾಧ್ಯಕ್ಷ ಡಾ.ದಿನೇಶ್, ಯೋಗ ಶಿಕ್ಷಕಿ ವಿಜಯ ಗಿರೀಶ್, ಜಿಲ್ಲಾ ಯೋಗ ಅಸೋಸಿಯೇಷನ್ ಅಧ್ಯಕ್ಷ ಬೆಂಕಿ ಶೇಖರಪ್ಪ, ಭಂಡಾರಿ ರವಿ, ವಿಜಯಾ ಗಿರೀಶ್ ಯೋಗ ಶಿಕ್ಷಣ ಕೇಂದ್ರದ ಪದಾಧಿಕಾರಿಗಳು ಇದ್ದರು.