

ಮಳವಳ್ಳಿ: ಆರೋಗ್ಯಕ್ಕರ ಜೀವನದ ಜತೆಗೆ ಕೌಟಂಬಿಕ ಬದುಕಿನಲ್ಲಿ ಸಮತೋಲನತೆ ಕಾಯ್ದುಕೊಳ್ಳಲು ಯೋಗ ಶಿಕ್ಷಣ ಸಹಕಾರಿಯಾಗಿದ್ದು, ಗ್ರಾಮೀಣ ಸಮುದಾಯ ಯೋಗಾಸನ ಮಾಡುವುದನ್ನು ರೂಢಿಸಿಕೊಳ್ಳಿ ಎಂದು ಸಾವಯವ ಕೃಷಿಕರ ಸಂಘದ ತಾಲೂಕು ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್ ಸಲಹೆ ನೀಡಿದರು.
ತಾಲೂಕಿನ ಬಂಡೂರು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಸೋಮವಾರ ಆಯೋಜಿಸಿದ್ದ ಗ್ರಾಮೀಣ ಶಾಖೆಯ 100ನೇ ದಿನದ ಅಂಗವಾಗಿ ‘ಮಾತೃ ಭೋಜನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಧುನಿಕ ಯುಗದಲ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಮಟ್ಟದಲ್ಲೂ ಒತ್ತಡದ ನಡುವೆಯೇ ಜೀವನ ನಡೆಸಬೇಕಾದ ಅನಿವಾರ್ಯತೆ ಇದೆ. ಇದರಿಂದಾಗಿ ಎಲ್ಲ ವರ್ಗದ ಜನರು ಮಾನಸಿಕ ಒತ್ತಡಕ್ಕೆ ಸಿಲುಕಿ ಬಳಲುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯೋಗಾಭ್ಯಾಸ ಮಾಡುವುದು ಒಳಿತು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಂಡ್ಯ ಜಿಲ್ಲಾಧ್ಯಕ್ಷ ಶಂಕರ್ ಶಾಸ್ತ್ರಿ, ಯಾಂತ್ರಿಕ ಜೀವಶೈಲಿಯಿಂದ ಪ್ರಸ್ತುತ ಜನರು ಹಲವಾರು ರೀತಿಯ ಖಿನ್ನತೆಗೆ ಒಳಗಾಗಿ ಚಿಕ್ಕ ವಯಸ್ಸಿನಲ್ಲೇ ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಪ್ರಸ್ತುತ ಕಾಲಘಟ್ಟದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಇಂತಹ ಸಮಸ್ಯೆಗಳ ನಿಯಂತ್ರಣಕ್ಕೆ ಯೋಗ ಶಿಬಿರ ಜನರಿಗೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಪ್ರತಿ ಗ್ರಾಮದಲ್ಲೂ ಉಚಿತವಾಗಿ ಯೋಗ ತರಬೇತಿ ಆರಂಭಿಸಲು ಚಿಂತನೆ ನಡೆಸಲಾಗಿದ್ದು, ಈಗಾಗಲೇ 100 ದಿನಗಳ ಶಿಬಿರವನ್ನು ಪೂರೈಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲೆಡೆ ಇಂತಹ ಕಾರ್ಯಕ್ರಮ ಹಮ್ಮಿಕೊ ಳ್ಳಲಾಗುವುದು ಎಂದರು.
ಮೈಸೂರಿನ ಕಾವೇರಿ ವಲಯ ಸಂಚಾಲಕ ಕಾಳಂಜಿ ಅಣ್ಣ ಮಾತನಾಡಿ, ಸ್ವಯಂ ಸೇವಕರಿಂದ ಯಾವುದೇ ಪ್ರತಿಫಲಾಕ್ಷೆ ಇಲ್ಲದೆ ಯೋಗ ಶಿಬಿರ ನಡೆಸಲಾಗುತ್ತಿದೆ. ಗ್ರಾಮೀಣ ಜನರು ಉಚಿತವಾಗಿ ಕಲಿತ ಯೋಗವನ್ನು ಜೀವನ ಪೂರ್ತಿ ಅಭ್ಯಾಸ ಮಾಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಚಿಕ್ಕಲಿಂಗಯ್ಯ, ಪುಟ್ಟಬಸವಯ್ಯ, ದೊಡ್ಡಣ್ಣ, ಪುಷ್ಪಾಂಜಲಿ, ಕುಮಾರ್ ಇದ್ದರು.