

ಬ್ಯಾಡಗಿ: ಜನರು ಒತ್ತಡ ಹಾಗೂ ಆರೋಗ್ಯ ನಿರ್ಲಕ್ಷ್ಯದಿಂದ ಹಲವು ಸಮಸ್ಯೆಗಳಲ್ಲಿ ಸಿಲುಕಿ ಮಾನಸಿಕ, ದೈಹಿಕ ನೆಮ್ಮದಿ ಕಳೆದುಕೊಳ್ಳುತ್ತಿದ್ದು, ಇದಕ್ಕೆ ಯೋಗಭ್ಯಾಸ ಸರಳ ಪರಿಹಾರವಾಗಿದೆ ಎಂದು ಯೋಗಮಾತೆ ಓಂಕಾರೇಶ್ವರಿ ಮಾತೆ ಹೇಳಿದರು.
ಇಲ್ಲಿನ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಬಸವ ಪತಂಜಲಿ ಯೋಗ ಸಮಿತಿ ಹಾಗೂ ವರ್ತಕರ ಸಂಘ, ಇನ್ನರ್‌ವೀಲ್ ಹಾಗೂ ರೋಟರಿ ಸಂಸ್ಥೆ ಮತ್ತು ಪರಿಸರ ಸ್ನೇಹಿ ಬಳಗದ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ನಿಸರ್ಗಯೋಗ, ವಿವಿಧ ರೋಗಗಳ ಮಾಹಿತಿ ಹಾಗೂ ಪ್ರಾಣಾಯಾಮ ಶಿಬಿರದಲ್ಲಿ ಅವರು ಮಾತನಾಡಿದರು.
ಪ್ರಾಚೀನ ಗ್ರಂಥಗಳಲ್ಲಿ ಆರೋಗ್ಯ ರಕ್ಷಣೆಗೆ ಅನುಸರಿಸಬೇಕಾದ ಆಹಾರ ಪದ್ಧತಿ, ಯೋಗ, ಧ್ಯಾನ, ಪ್ರಾಣಾಯಾಮ ಸೇರಿದಂತೆ ವಿವಿಧ ಮಾಹಿತಿ ತಿಳಿಸಿದ್ದಾರೆ. ನಾವು ದೇಹ ಸುಸ್ಥಿತಿಯಲ್ಲಿಟ್ಟುಕೊಳ್ಳಲು ಜೀವನ ಕ್ರಮ ಬದಲಾಯಿಸಿಕೊಳ್ಳಬೇಕಿದೆ. ಸ್ವಾರ್ಥದಿಂದ ಶುದ್ಧ ಆಹಾರ ಸಿಗದಂತಾಗಿದ್ದು, ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಹೆಚ್ಚಿದೆ ಎಂದರು.
ಹಲವು ರೋಗಗಳಿಗೆ ಯೋಗಾಸನ ದಿವ್ಯ ಔಷಧವಾಗಿದೆ. ಶಾಲಾ ಕಾಲೇಜ್‌ಗಳಲ್ಲಿ ಯೋಗಾಸನಕ್ಕೆ ಆದ್ಯತೆ ನೀಡಲಾಗುತ್ತಿದೆ. ಸಾರ್ವಜನಿಕರು ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಯೋಗಶಿಬಿರ ಆಯೋಜಿಸಲಾಗುತ್ತಿದೆ. ಬ್ಯಾಡಗಿಯಲ್ಲಿ 15 ದಿನಗಳ ಕಾಲ ಶಿಬಿರ ನಡೆಸಲಾಗುತ್ತಿದೆ ಎಂದರು.
ರೋಟರಿ ಅಧ್ಯಕ್ಷ ಮಾಲತೇಶ ಉಪ್ಪಾರ ಮಾತನಾಡಿ, ಆಧುನಿಕ ಜೀವನದ ಜಂಜಾಟದಲ್ಲಿ ಆರೋಗ್ಯದತ್ತ ಕಾಳಜಿ ಕೊರತೆ ಹಾಗೂ ಉತ್ತಮ ಆಹಾರ ಸೇವಿಸದಿರುವುದು ರೋಗಗಳ ಉಲ್ಬಣಕ್ಕೆ ಕಾರಣವಾಗಿದೆ.
ದುಡಿಮೆಯ ಬಹುತೇಕ ಹಣ ರೋಗಗಳ ಪರೀಕ್ಷೆ ಹಾಗೂ ಔಷಧಗಳಿಗೆ ಖರ್ಚು ಮಾಡುವಂತಾಗಿದೆ. ಔಷಧ ರಹಿತ ಜೀವನ ನಡೆಸಲು ಉತ್ತಮ ಆಹಾರ, ಅಭ್ಯಾಸ ಪದ್ಧತಿ ರೂಢಿಸಿಕೊಳ್ಳಬೇಕು ಎಂದರು.\
ರೋಟರಿ ಅಧ್ಯಕ್ಷ ಮಾಲತೇಶ ಉಪ್ಪಾರ, ಇನ್ನರ್‌ವೀಲ್ ಅಧ್ಯಕ್ಷೆ ಮಹೇಶ್ವರಿ ಪಸಾರದ, ಮುರಿಗೆಪ್ಪ ಶೆಟ್ಟರ್, ಮಂಜುನಾಥ ಉಪ್ಪಾರ, ಮಂಜುನಾಥ ಬೋವಿ, ಸಿಪಿಐ ಬಸವರಾಜ, ದಾಕ್ಷಾಯಿಣ ಹರಗಮಗಟ್ಟಿ, ವಿಶ್ನನಾಥ ಅಂಕಲಕೋಟಿ, ಮೋಹನಕುಮಾರ ಹುಲ್ಲತ್ತಿ, ಪರಶುರಾಮ ಮೇಲಗಿರಿ, ಕಮಲಾ ನಿಡಗುಂದಿ, ಶಿವಹೋಗಿ ಹೊಸಮನಿ, ಕೊಟ್ರೇಶ ತೊಪ್ಪಲದ, ಮಹೇಶ ಖಟಾವಕರ ಇತರರಿದ್ದರು.