ಎಲ್ಲ ರೋಗಗಳಿಗೆ ಯೋಗ ರಾಮಬಾಣ

21 njd news 01
ನಂಜನಗೂಡು ತಾಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಹಾಗೂ ಜೆಎಸ್‌ಎಸ್ ವಸತಿ ಶಾಲೆ ಸಹಯೋಗದೊಂದಿಗೆ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಡಾ.ಎಚ್. ಬಸವನಗೌಡಪ್ಪ, ಅಕಾಡೆಮಿ ಡೀನ್ ಡಾ. ವಿಶಾಲ್ ಕುಮಾರ್ ಗುಪ್ತಾ, ಡಾ. ಎಂ.ಯು. ಸುಜನ್, ಜಿ.ಎಲ್. ತ್ರಿಪುರಾಂತಕ ಇತರರು ಪಾಲ್ಗೊಂಡಿದ್ದರು.
Published on

ನಂಜನಗೂಡು: ಯೋಗವು ಅನೇಕ ರೋಗಗಳಿಗೆ ರಾಮಬಾಣವಾಗಿದೆ ಎಂದು ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಉಪಕುಲಪತಿ ಡಾ.ಎಚ್. ಬಸವನಗೌಡಪ್ಪ ಅಭಿಪ್ರಾಯಪಟ್ಟರು.

ತಾಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಹಾಗೂ ಜೆಎಸ್‌ಎಸ್ ವಸತಿ ಶಾಲೆಯ ಸಹಯೋಗದೊಂದಿಗೆ ಆಯೋಜಿಸಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಶರೀರ, ಮನಸ್ಸು ಮತ್ತು ಏಕತೆಗಾಗಿ ಉಪಯೋಗಿಸಲಾದ ಯೋಗ ಪಥವು ಜಗತ್ತಿನಾದ್ಯಂತ ಜನಪ್ರಿಯವಾಗಿದೆ. ಯೋಗದ ಮೂಲಕ ಶ್ರದ್ಧೆ, ನಿಯಮ, ಧ್ಯಾನ ಮತ್ತು ಸಮಾಧಿಯ ಮಾರ್ಗದಿಂದ ಪರಿಪೂರ್ಣತೆಯತ್ತ ಸಾಗಬಹುದು ಎಂದು ನುಡಿದರು.

ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಅಕಾಡೆಮಿ ಡೀನ್ ಡಾ. ವಿಶಾಲ್‌ಕುಮಾರ್ ಗುಪ್ತಾ ಮಾತನಾಡಿ, ಯೋಗ ಒಂದು ದಿನದ ಆಚರಣೆಗೆ ಸೀಮಿತವಾಗಬಾರದು. ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಮಾನಸಿಕ ಮತ್ತು ದೈಹಿಕ ಒತ್ತಡ ನಿವಾರಣೆಯಾಗುತ್ತದೆ. ಯೋಗವು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜತೆಗೆ ಆರೋಗ್ಯವೃದ್ಧಿಗೆ ಸಹಕಾರಿಯಾಗಿದೆ. ವಿಶ್ವಕ್ಕೆ ಯೋಗವನ್ನು ಕೊಡುಗೆಯಾಗಿ ನೀಡಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಈ ವರ್ಷ ಒಂದು ವಿಶ್ವ ಒಂದು ಆರೋಗ್ಯ ಎಂಬ ವಿಷಯದೊಂದಿಗೆ ಯೋಗ ದಿನ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಜೆಎಸ್‌ಎಸ್ ಸಂಸ್ಥೆಯ ಸಂಯೋಜನಾಧಿಕಾರಿ ಜಿ.ಎಲ್. ತ್ರಿಪುರಾಂತಕ ಮಾತನಾಡಿ, ಇಂದು ಕಾರು, ಬಂಗಲೆ ಇತ್ಯಾದಿ ದುಬಾರಿ ವಸ್ತುಗಳನ್ನು ಹಣ ಕೊಟ್ಟು ಕೊಂಡುಕೊಳ್ಳಬಹುದು. ಆದರೆ ಆರೋಗ್ಯ ಕೊಳ್ಳಲು ಸಾಧ್ಯವಿಲ್ಲ. ಒಂದು ಕಾಲದಲ್ಲಿ ಹಾವಾಡಿಗರ ದೇಶ ಎಂದು ಲೇವಡಿ ಮಾಡಿಸಿಕೊಳ್ಳುತ್ತಿದ್ದ ಭಾರತ ದೇಶ ಇಡೀ ಜಗತ್ತಿಗೆ ಯೋಗದ ಮುಖಾಂತರ ಆರೋಗ್ಯ ಜಾಗೃತಿ ಮೂಡಿಸಿದೆ. ಯುವಜನರು ಜಿಮ್ ಸೇರಲು ಉತ್ಸಾಹ ತೋರುವಂತೆ ಯೋಗಾಭ್ಯಾಸಕ್ಕೂ ಉತ್ಸಾಹ ತೋರಬೇಕು. ಯೋಗಕ್ಕೆ ಅನೇಕ ರೋಗಗಳನ್ನು ತಡೆಗಟ್ಟುವ ಶಕ್ತಿಯಿದೆ, ಆರೋಗ್ಯ ವೃದ್ಧಿಸಿಕೊಂಡು ನಿಮ್ಮ ಆಯಸ್ಸನ್ನು ಸಹ ವೃದ್ಧಿ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನವದೆಹಲಿಯ ಆಯುಷ್ ಇಲಾಖೆಯ ಸಿಸಿಆರ್‌ವೈಎನ್ ಡಾ.ಅಕ್ಷತಾ, ಡಾ.ಎಂ.ಯು. ಸುಜನ್, ಸುತ್ತೂರಿನ ಜೆಎಸ್‌ಎಸ್ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net