

ಚಿಕ್ಕಮಗಳೂರು: ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯದಿಂದಿರಲು ಯೋಗ ಅತೀ ಮುಖ್ಯವಾಗಿದ್ದು, ದಿನ ನಿತ್ಯದ ಜೀವನದಲ್ಲಿ ಯೋಗಭ್ಯಾಸವನ್ನು ಅಳವಡಿಸಿಕೊಂಡಲ್ಲಿ ಸದೃಢರಾಗಿರಲು ಸಾಧ್ಯ ಎಂದು ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ, ವಿವಿಧ ಯೋಗ ಸಂಘ, ಸಂಸ್ಥೆಗಳ ಆಶ್ರಯದಲ್ಲಿ ನಡೆದ ೧೦ನೇ ಆಂತಾರಾಷ್ಟಿçÃಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ದಿನನಿತ್ಯದ ಜೀವನದಲ್ಲಿ ಯೋಗಾಭ್ಯಾಸವನ್ನು ಅಳವಡಿಸಿಕೊಂಡಲ್ಲಿ ಮನಸ್ಸಿನಲ್ಲಿ ಏಕಾಗ್ರತೆ ಮೂಡಿ ಆತಂಕ ದೂರವಾಗುತ್ತದೆ. ಮನಸ್ಸು, ಶರೀರ, ಆತ್ಮ ಒಂದುಗೂಡುವುದೇ ಯೋಗ. ನಮ್ಮ ದೇಹ, ಮನಸ್ಸು ನಿರ್ವಹಣೆಗೆ ಯಾವುದೇ ಔಷಧಗಳಿಲ್ಲದೆ ಪ್ರತಿನಿತ್ಯ ಯೋಗ ಮಾಡುವುದರಿಂದ ತುಂಬಾ ಲಾಭವಾಗುತ್ತದೆ. ಸ್ವಯಂ ಪ್ರೇರಿತರಾಗಿ ಪ್ರತಿಯೊಬ್ಬರು ಯೋಗವನ್ನು ದಿನನಿತ್ಯದ ಜೀವನ ಶೈಲಿಯಾಗಿ ಅಳವಡಿಸಿಕೊಳ್ಳುವುದರ ಜೊತೆಗೆ ನಿಮ್ಮ ಸುತ್ತಮುತ್ತಲಿನವರಿಗೂ ಯೋಗದ ಮಹತ್ವ ತಿಳಿಸಬೇಕು ಎಂದರು.
ಯೋಗವು ಆಯುರ್ವೇದದ ಅವಿಭಾಗ್ಯ ಅಂಗವಾಗಿದ್ದು, ಇಡೀ ಪ್ರಪಂಚಕ್ಕೆ ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ತನಗಾಗಿ ಮತ್ತು ಸಮಾಜಕ್ಕಾಗಿ ಯೋಗ ಎಂಬುದು ೧೦ನೇ ಅಂತರಾಷ್ಟಿçÃಯ ಯೋಗ ದಿನಾಚರಣೆಯ ಘೋಷ ವಾಕ್ಯವಾಗಿದ್ದು, ಮಹಿಳಾ ಸಬಲೀಕರಣಕ್ಕಾಗಿ ಯೋಗ ಎಂಬ ಧ್ಯೇಯದೊಂದಿಗೆ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ದೈಹಿಕ ಆರೋಗ್ಯವನ್ನು ಮೀರಿ ಯೋಗವು ಮಾನಸಿಕ ಯೋಗ ಕ್ಷೇಮಕ್ಕೆ ಗಮನಾರ್ಹವಾಗಿ ಪ್ರಯೋಜನವನ್ನು ನೀಡುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಮಾನಸಿಕವಾಗಿ ಸ್ಪಷ್ಟತೆಯನ್ನು ಉತ್ತೇಜಿಸುತ್ತದೆ. ಆತಂಕ ಮತ್ತು ಖಿನ್ನತೆಯನ್ನು ಹೋಗಲಾಡಿಸಲು ಯೋಗವೇ ನಿರ್ಣಾಯಕವಾಗಿದೆ ಎಂದರು.
ಜಿಪA ಸಿಇಒ ಡಾ. ಬಿ.ಗೋಪಾಲಕೃಷ್ಣ ಮಾತನಾಡಿ, ಜಗತ್ತಿಗೆ ಯೋಗ ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ವಿಶ್ವಸಂಸ್ಥೆ ೨೦೧೪ ರಲ್ಲಿ ಸರ್ವಾನುಮತದಿಂದ ಜೂನ್ ೨೧ನ್ನು ಯೋಗ ದಿನಾಚರಣೆಯಾಗಿ ಘೋಷಣೆ ಮಾಡಿದೆ. ಇಂದು ವಿಶ್ವದ ೧೮೭ ದೇಶಗಳಲ್ಲಿ ಯೋಗ ದಿನಾಚರಣೆ ಆಚರಿಸಲಾಗುತ್ತದೆ. ಯೋಗವನ್ನು ನಿಯಮಿತವಾಗಿ ಮಾಡುವುದರಿಂದ ರಕ್ತ ಪರಿಚಲನೆ, ಜೀರ್ಣಕ್ರಿಯೆ ಸರಾಗವಾಗಿ ಉಂಟಾಗಿ ದೈಹಿಕ ಸ್ಥಿತಿಗತಿ ಉತ್ತಮವಾಗುತ್ತದೆ. ಅಲ್ಲದೆ ಒತ್ತಡದ ಜೀವನ ಶೈಲಿಯಿಂದ ಪರಾಗಿ ಮಾನಸಿಕ ನೆಮ್ಮದಿ ಪಡೆಯಲು ಯೋಗ ಸಹಕರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲಕೃಷ್ಣ, ಎಸ್‌ಪಿ ವಿಕ್ರಮ್ ಅಮಟೆ, ಡಿಎಚ್‌ಒ ಡಾ. ಅಶ್ವಥ್ ಬಾಬು, ಆಯುಷ್ ಅಧಿಕಾರಿ ಡಾ. ಗೀತಾ, ಆಯುಷ್ ಇಲಾಖೆ ಅಧಿಕಾರಿ ಡಾ. ಹೇಮಾ ಮತ್ತಿತರರಿದ್ದರು. ವಿವಿಧ ಯೋಗ ಸಂಘ ಸಂಸ್ಥೆಗಳು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಜಿಲ್ಲಾ ಎನ್‌ಎಸ್‌ಎಸ್ ಘಟಕ ಹಾಗೂ ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಸಾಮೂಹಿಕ ಯೋಗದಲ್ಲಿ ಪಾಲ್ಗೊಂಡಿದ್ದರು.