ವ್ಯಕ್ತಿತ್ವ ವಿಕಸನಕ್ಕೆ ಯೋಗ ಸಹಕಾರಿ

h15-function
Published on

ಹುಬ್ಬಳ್ಳಿ: ಮನೋದೈಹಿಕ ಆರೋಗ್ಯಕ್ಕೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಯೋಗ ಸಹಕಾರಿ ಎಂದು ಸಿಂಗಾಪುರದ ಅಂತಾರಾಷ್ಟ್ರೀಯ ಜಲ ಯೋಗ ಥೆರಪಿಸ್ಟ್ ಮತ್ತು ಇನ್‌ಸ್ಟ್ರಕ್ಟರ್ ಬೈಲಬಸಪ್ಪ ಕಬ್ಬೇರಳ್ಳಿ ಹೇಳಿದರು.
ಇಲ್ಲಿಯ ಶ್ರೀ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್.ಎಸ್.ಕೆ ವಿಜ್ಞಾನ ಸಂಸ್ಥೆಯಲ್ಲಿ ಕಾಲೇಜ್ ಒಕ್ಕೂಟ ಮತ್ತು ಕನ್ನಡ ವಿಭಾಗದ ಆಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಯೋಗದಿಂದ ಆರೋಗ್ಯ ವಿಷಯ ಕುರಿತು ಅವರು ಮಾತನಾಡಿದರು.
ಯೋಗದಿಂದ ಅನಾರೋಗ್ಯ ತಪ್ಪಿಸಲು ಸಾಧ್ಯ. ಇಂದಿನ ದಿನಗಳಲ್ಲಿ ಯೋಗ ಫ್ಯಾಷನ್ ಆಗಿದ್ದು, ಎಲ್ಲರೂ ನಿತ್ಯದ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯ ದೃಷ್ಟಿಯಿಂದ ಶಿಕ್ಷಣ ಕ್ಷೇತ್ರದಲ್ಲಿಯೂ ಯೋಗವನ್ನು ಒಂದು ಕೋರ್ಸ್ ಆಗಿ ಪರಿಗಣಿಸುತ್ತಿದ್ದಾರೆ. ಯೋಗದಿಂದ ಉತ್ತಮ ಆರೋಗ್ಯ, ದೃಢ ನಿರ್ಧಾರ, ಶಿಸ್ತು, ಆತ್ಮಸ್ಥೈರ್ಯ, ಏಕಾಗ್ರತೆ ಲಭಿಸುತ್ತದೆ. ಉತ್ತಮ ವ್ಯಕ್ತಿತ್ವ ಹಾಗೂ ನೈಸರ್ಗಿಕ ಸೌಂದರ್ಯ ಕಾಪಾಡಿಕೊಳ್ಳಲು ಯೋಗ ಸಹಾಯಕ ಎಂದು ಹೇಳಿದರು.
ಪ್ರಭಾರಿ ಪ್ರಾಚಾರ್ಯ ಡಾ. ವೈ.ಎನ್.ನಾಗೇಶ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಗುರಿ ಸಾಧಿಸಲು ಶಿಸ್ತು, ನಿರಂತರ ಕಲಿಕೆ, ಪ್ರಯತ್ನ, ಸ್ಪಷ್ಟ ನಿರ್ಧಾರ, ಶ್ರಮವನ್ನು ತಮ್ಮ ಶೈಕ್ಷಣಿಕ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಬೈಲಬಸಪ್ಪ ಕಬ್ಬೇರಳ್ಳಿ ಅವರನ್ನು ಸನ್ಮಾನಿಸಲಾಯಿತು.
ಕಾಲೇಜ್ ಒಕ್ಕೂಟದ ಕಾರ್ಯಾಧ್ಯಕ್ಷೆ ಡಾ. ವಿಜಯಶ್ರೀ ಹಿರೇಮಠ ಅತಿಥಿಗಳನ್ನು ಪರಿಚಯಿಸಿದರು. ಕನ್ನಡ ವಿಭಾಗದ ಉಪನ್ಯಾಸಕ ಡಾ. ಆರ್.ಐ. ಹರಕುಣಿ ಸ್ವಾಗತಿಸಿದರು. ವಿದ್ಯಾರ್ಥಿನಿ ರಾಧಿಕಾ ದೇಸಾಯಿ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಲಕ್ಷ್ಮೀ ಮುಗನೂರು ನಿರೂಪಿಸಿದರು. ಐಶ್ವರ್ಯ ಹುತ್ತಗಣ್ಣನವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net