

ಬೆಂಗಳೂರು: ಜಗತ್ತಿಗೆ ಐದು ಸಾವಿರ ವರ್ಷಗಳ ಹಿಂದೆಯೇ ಸನಾತನ ಧರ್ಮವು ಯೋಗವನ್ನು ಕೊಡುಗೆಯಾಗಿ ನೀಡಿದ್ದು, ಯೋಗದಿಂದ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಹೆಚ್ಚಿನ ಸಹಕಾರಿಯಾಗಿದೆ ಎಂದು ಕನ್ನಡದ ಪೂಜಾರಿ ಖ್ಯಾತಿಯ ಹಿರೇಮಗಳೂರು ಕಣ್ಣನ್ ತಿಳಿಸಿದರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮಹಾಲಕ್ಷ್ಮಿಪುರದ ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರವು ಭಾನುವಾರ ಆಯೋಜಿಸಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯಾರ ಮನಸ್ಸು ಯೋಗದಿಂದ ಕೂಡಿರುತ್ತದೆಯೋ ಅಂತಹವರ ನಡೆ ಮತ್ತು ನುಡಿ ಕೇವಲ ಆದರ್ಶಪ್ರಾಯವಾಗಿರುವುದಿಲ್ಲ, ಆರೋಗ್ಯ ಪ್ರಾಯವಾಗಿಯೂ ಇರುತ್ತದೆ. ಆರೋಗ್ಯವೆಂದರೆ, ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ - ಈ ಆರೂ ಯೋಗ್ಯವಾಗಿದ್ದರೆ ನಮ್ಮ ಜೀವನದಲ್ಲಿ ಅರೋಗ್ಯ ಸಮರ್ಪಕವಾಗಿರುತ್ತದೆ ಎಂದು ಅವರು ವಿಶ್ಲೇಷಿಸಿದರು.
ಯೋಗಾಚಾರ್ಯರಿಗೆ ಸನ್ಮಾನ:
ಯೋಗ ಕ್ಷೇತ್ರದಲ್ಲಿ ದುಡಿದಿರುವ ಯೋಗಾಚಾರ್ಯ, ಪರ್ಯಾಯ ಔಷಧ ತಜ್ಞ ಡಾ. ಬಿ.ಎನ್. ಬ್ರಹ್ಮಾಚಾರ್ಯ, ಹುಬ್ಬಳ್ಳಿಯ ಧನ್ಯೋಸ್ಮಿ ಯೋಗ ಶಾಲೆಯ ಸಂಸ್ಥಾಪಕ, ಯೋಗಾಚಾರ್ಯ ವಿನಾಯಕ ತಲಗೇರಿ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಯೋಗ ಕೇಂದ್ರದ ಸದಸ್ಯರು ಮತ್ತು ನೃತ್ಯಪಟುಗಳ ಸಂಯೋಜನೆಯಲ್ಲಿ ಯೋಗ ಪ್ರದರ್ಶನ ನಡೆಸಿಕೊಟ್ಟರು. ಜತೆಗೆ ಜನಪದ, ಕನಕದಾಸರ ಹಾಡು ಮತ್ತು ದೇಶಭಕ್ತಿ ಗೀತೆಗಳನ್ನು ಹಾಡಲಾಯಿತು.
ಸಮಾರಂಭದಲ್ಲಿ ಯೋಗಾಚಾರ್ಯ ನಾಗೇಶ್, ಲೋಕೇಶ್ ಮತ್ತಿತರರಿದ್ದರು.
ಜೀವನದಲ್ಲಿ ಮಾನ್ಯತೆಗಿಂತ ಧನ್ಯತೆ ಬಹುಮುಖ್ಯ. ಸನ್ಮಾನ ನಮ್ಮ ಜವಾಬ್ದಾರಿ ಹೆಚ್ಚಿಗೆ ಮಾಡುತ್ತದೆ. ಯೋಗ ಎಲ್ಲರನ್ನು ಒಟ್ಟುಗೂಡಿಸುತ್ತದೆ, ಯೋಗದಿಂದ ಮನಸ್ಸಿನ ಮೇಲೆ ನಿಯಂತ್ರಣ ತಂದು, ಪರಿವರ್ತನೆಗೆ ಸಹಕರಿಸುತ್ತದೆ.
- ವಿನಾಯಕ ತಲಗೇರಿ, ಯೋಗಾಚಾರ್ಯ