ಆರೋಗ್ಯ ರಕ್ಷಣೆಗೆ ಯೋಗ ಸಹಕಾರಿ: ಡಾ.ರವೀಂದ್ರನಾಥ್

24
Published on

ಮೈಸೂರು: ಮನಸ್ಸಿನ ನಿಯಂತ್ರಣದ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಸಹಕಾರಿ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ರವೀಂದ್ರನಾಥ್ ಹೇಳಿದರು.

ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದಿಂದ ನಗರದ ಜಯದೇವ ಆಸ್ಪತ್ರೆಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಡಿಯೋ ಯೋಗ-2025 ವಿಷಯ ಕುರಿತ ರಾಷ್ಟ್ರೀಯ ಕಾರ್ಯಾಗಾರವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯ ಎಂದರೆ ದೈಹಿಕ, ಮಾನಸಿಕ, ಅಧ್ಯಾತ್ಮಿಕವಾದ ಆರೋಗ್ಯ ಎನ್ನಬಹುದು. ಇತ್ತೀಚೆಗೆ ಯುವಕರಲ್ಲಿ ಹೃದ್ರೋಗ ಹೆಚ್ಚಾಗುತ್ತಿದ್ದು, ಇದಕ್ಕೆ ಒತ್ತಡದ ಜೀವನಶೈಲಿ, ವಾಯು ವಾಲಿನ್ಯ ಹಾಗೂ ಇತರ ಕಾಯಿಲೆಗಳು ಕಾರಣ ಎಂದು ಅಭಿಪ್ರಾಯಪಟ್ಟರು.

ಕಾಯಿಲೆಗಳನ್ನು ತಡೆಗಟ್ಟಲು, ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಪ್ರಮುಖವಾದದ್ದು. ನಿಯಮಿತವಾಗಿ ಯೋಗಾಭ್ಯಾಸ ಮಾಡಿಕೊಂಡು ಬಂದರೆ ಸಾಕಷ್ಟು ಅನುಕೂಲಗಳು ಇವೆ. ಹೃದ್ರೋಗಕ್ಕೆ ಕಾರಣವಾಗಬಹುದಾದ ಮಧುಮೇಹ ಕೂಡ ನಿಯಂತ್ರಣಕ್ಕೆ ಬರಲಿದೆ ಎಂದರು.

ಯುವಕರು ದುಶ್ಚಟಗಳಿಂದ ದೂರವಿರುವುದರ ಜತೆ ಯೋಗ, ಧ್ಯಾನದಿಂದ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಬಹುದು. ಐಸಿಎಂಆರ್ ಸಹಯೋಗದಲ್ಲಿ ಯೋಗ ಕುರಿತು ಸಂಶೋಧನೆ ನಡೆಯುತ್ತಿದೆ ಎಂದು ಹೇಳಿದರು.

ಯೋಗ ಗುರು ಡಾ.ರಾಘವೇಂದ್ರ ರಾವ್ ಮಾತನಾಡಿ, ಯೋಗ ಎಂದರೆ ಆಸನ, ಪ್ರಾಣಾಯಾಮಗಳಷ್ಟೇ ಅಲ್ಲ. ಅಥವಾ ಎಂಟು ಅಂಗಗಳಿರುವ ಯೋಗಶಾಸ್ತ್ರವಷ್ಟೇ ಅಲ್ಲದೆ ಅದು ಭಾರತವು ಸಾಕ್ಷಾತ್ಕರಿಸಿಕೊಂಡಿರುವ ಒಂದು ಜೀವನ ದೃಷ್ಟಿ ಆಗಿದೆ ಎಂದರು.

ವಿಶಾಖಪಟ್ಟಣದಲ್ಲಿ 3 ಲಕ್ಷಕ್ಕೂ ಹೆಚ್ಚು ಮಂದಿ ಯೋಗ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ದಿನೇದಿನೆ ಯೋಗ ಪ್ರಸಿದ್ಧಿಯಾಗುತ್ತಿರುವುದು ಉತ್ತಮ ಬೆಳವಣಿಗೆ. ಆದರೆ ಯೋಗ, ಸಂಶೋಧನೆಯಲ್ಲಿ ಹಿಂದೆ ಉಳಿದಿದೆ. ಈಗಾಗಲೇ ಮಲ್ಟಿ ಸೆಂಟ್ರಿಕ್ ಸ್ಟಡಿ ನಡೆಯುತ್ತಿದ್ದು ಯೋಗದಿಂದ ನಮ್ಮ ದೇಹ ಆರೋಗ್ಯದಿಂದ ಇರುತ್ತದೆ. ಇದರ ಕುರಿತು ಇನ್ನಷ್ಟು ಅಧ್ಯಯನ, ಸಂಶೋಧನೆ ನಡೆಯಬೇಕು ಎಂದು ಹೇಳಿದರು.

ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಿ, ಸಾಂಪ್ರದಾಯಿಕ ಪದ್ಧತಿಗಳಾದ ಯೋಗ ಕುರಿತು ಕಾರ್ಯಕ್ರಮ ಆಯೋಜನೆ ಮಾಡಿರುವುದು ಸಂತೋಷದ ವಿಷಯ. ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಸುವ ಮೂಲಕ ಯೋಗ ಕುರಿತು ಜನರು ಹೆಚ್ಚು ಒಲವು ಹೊಂದುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮೈಸೂರು ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್.ಸದಾನಂದ, ಆದಿಚುಂಚನಗಿರಿ ವಿಶ್ವವಿದ್ಯಾನಿಲುಂದ ಕುಲಪತಿ ಡಾ. ಎಂ.ಎ.ಶೇಖರ್, ವೈದ್ಯರಾದ ಡಾ.ರಾಘವೇಂದ್ರ ರಾವ್, ಡಾ.ಎಲ್.ಎಸ್.ಎನ್.ಸೇನಾನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net