

ಮುಂಡರಗಿ: ಇಂದಿನ ಕಲುಷಿತ ವಾತಾವರಣದಲ್ಲಿ ಆರೋಗ್ಯವನ್ನು ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯವಾದ ಸಂಗತಿ. ಆರೋಗ್ಯ ಸಂರಕ್ಷಣೆಯಲ್ಲಿ ಯೋಗದ ಪಾತ್ರ ಮಹತ್ವದ್ದಾಗಿದೆ ಎಂದು ಬಿ.ಆರ್.ಸಿ. ಸಂಪನ್ಮೂಲ ವ್ಯಕ್ತಿ ಹನುಮರೆಡ್ಡಿ ಇಟಗಿ ಹೇಳಿದರು.
ಪಟ್ಟಣದ ಅನ್ಮೋಲ್ ಯೋಗ ಕೇಂದ್ರದಲ್ಲಿ ಆಯೋಜಿಸಿದ್ದ ಯೋಗ ಶಿಕ್ಷಣ ದತ್ತು ಯೋಜನೆಗಾಗಿ ಸಂಘಟಿಸಿದ್ದ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ಅನ್ಮೋಲ್ ಯೋಗ ಕೇಂದ್ರವು ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ 10 ಮಕ್ಕಳಿಗೆ ಉಚಿತ ಯೋಗ ಶಿಕ್ಷಣ ನೀಡಿ ಮಕ್ಕಳಲ್ಲಿ ಆರೋಗ್ಯಕರ ಜೀವನ ಶೈಲಿ ರೂಢಿಸಲು ಯೋಜನೆ ರೂಪಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ’ ಎಂದರು.
ಮಕ್ಕಳ ಸಾಹಿತಿ ಡಾ.ನಿಂಗು ಸೊಲಗಿ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳಿಗೆ ಸಮರ್ಪಕ ಯೋಗ ಶಿಕ್ಷಣ ದೊರೆತಲ್ಲಿ ಮಕ್ಕಳು ದುಷ್ಟ ಹವ್ಯಾಸಗಳಿಂದ ದೂರವಿದ್ದು ಒತ್ತಡರಹಿತ ಆರೋಗ್ಯದ ಜೀವನ ರೂಢಿಸಿಕೊಂಡು ಉತ್ತಮ ನಾಗರಿಕರಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ರಂಗ ನಿರ್ದೇಶಕ ಸಂತೋಷ ಅಂಗಡಿ, ಅಧ್ಯಕ್ಷತೆ ವಹಿಸಿದ್ದ ಡಾ.ಚಂದ್ರಕಾಂತ ಇಟಗಿ ಮಾತನಾಡಿದರು. ವನಜಾಕ್ಷಿ, ಸುಧಾ ಪೂಜಾರ, ಸಂತೋಷ ಚೌಟಗಿ ಇತರರು ಇದ್ದರು. ಅನ್ಮೋಲ್ ಯೋಗ ಕೇಂದ್ರದ ನಿರ್ದೇಶಕಿ ಡಾ.ಮಂಗಳಾ ಇಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಯೋತಿ ಹಕ್ಕಂಡಿ ನಿರೂಪಿಸಿದರು. ವಾಸಂತಿ ಯಾಳಗಿ ವಂದಿಸಿದರು.