

ಕುಶಾಲನಗರ: ಯೋಗದಿಂದ ಬಹಳಷ್ಟು ಕಾಯಿಲೆಗಳನ್ನು ಗುಣಪಡಿಸಬಹುದು ಎಂದು ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎವರೆಸ್ಟ್ ಡಿಸೋಜ ಹೇಳಿದರು.
ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಮತ್ತು ಐಕ್ಯೂಎಸಿ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಯುವ ಮಾನಸಿಕ ಆರೋಗ್ಯದ ನಿರ್ವಹಣೆಗೆ ತಂತ್ರಗಳು ಕುರಿತು ಉಪನ್ಯಾಸ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯೋಗ ಎನ್ನುವುದು ಗುರುಗಳಿಂದ ಕಲಿಯಬೇಕೇ ಹೊರತು, ದೂರದರ್ಶನ ಅಥವಾ ಪುಸ್ತಕಗಳಿಂದ ಕಲಿಯಬಾರದು. ಯೋಗ ಮಾಡುವಾಗ ಆಗುವ ತಪ್ಪುಗಳನ್ನು ಗುರು ಸರಿಪಡಿಸಲು ಸಾಧ್ಯವೇ ಹೊರತು ಸಾಮಾಜಿಕ ಜಾಲಾತಾಣದಿಂದಲ್ಲ. ಯೋಗಾಭ್ಯಾಸವನ್ನು ಮುಂಜಾನೆಯ ಬ್ರಾಹ್ಮಿ ಮುಹೂರ್ತದ ಸಮಯದಲ್ಲಿ ಮಾಡಬೇಕು. ತಮಗೆ ಸಿಕ್ಕಿದ ಸಮಯದಲ್ಲಿ ಮಾಡಬಾರದು. ಏಕೆಂದರೆ ಮುಂಜಾನೆ ಪ್ರಶಾಂತವಾದ ವಾತಾವರಣವಿರುತ್ತದೆ, ಮನುಷ್ಯನ ಅಂಗಾಂಗಗಳು ಧನಾತ್ಮಕವಾಗಿ ವರ್ತಿಸುತ್ತವೆ ಎಂದರು.
ಯೋಗದಿಂದ ಮಾನಸಿಕ ನೆಮ್ಮದಿ, ಶಾಂತತೆ, ಧನಾತ್ಮಕ ನಿಲುವು, ಮನಸ್ಸಿಗೆ ಉಲ್ಲಾಸ ನೀಡುವುದರೊಂದಿಗೆ ಮಕ್ಕಳ ಓದುವಿಕೆಯಲ್ಲಿ ಆಸಕ್ತಿ ಮೂಡಿಸುತ್ತದೆ ಎಂದರು.
ಕುಶಾಲನಗರ ಸರ್ಕಾರಿ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಪಿ.ಪಿ.ಜಯಂತಿ ಮಾತನಾಡಿ, ಮನುಷ್ಯನ ಮಾನಸಿಕ, ದೈಹಿಕ ಸದೃಢತೆಗೆ ಯೋಗ ಅತ್ಯಗತ್ಯ. ಅದರಲ್ಲೂ ವಿದ್ಯಾರ್ಥಿ ದಿಸೆಯಲ್ಲಿ ಯೋಗ ಮಾಡುವುದರಿಂದ ಆರೋಗ್ಯ ವೃದ್ಧಿಯಾಗಲಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಬಿ.ಎಂ.ಪ್ರವೀಣ್‌ಕುಮಾರ್, ಸಹಪ್ರಾಧ್ಯಾಪಕ ಡಾ.ಬಿ.ಡಿ.ಹರ್ಷ, ಟಿ.ಎಂ.ಸುಧಾಕರ್, ಕೆ.ಪಿ.ಕುಸುಮಾ, ಎಸ್.ಸುನೀಲ್‌ಕುಮಾರ್, ಕೆ.ಆರ್.ವಂದನಾ, ರಶ್ಮಿ, ಟಿ.ಎಂ.ದೀಪಾ, ಮಧುಶ್ರೀ, ಪಿ.ರಮೇಶ್‌ಚಂದ್ರ, ಡಾ.ರಾಧಿಕಾ, ನಟರಾಜ್, ಮಹಾದೇವ, ವಿದ್ಯಾರ್ಥಿಗಳು ಇದ್ದರು.