

ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲಾಡಳೀತ ವತಿಯಿಂದ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ಯ ಗುರುವಾರ ಬೆಳಗ್ಗೆ 9ಕ್ಕೆ ನಗರದ ಮುನ್ಸಿಪಲ್ ಆವರಣದಲ್ಲಿ ಯೋಗ ನಡೆ ಜಾಥಾಕ್ಕೆ ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರ ಚಾಲನೆ ನೀಡಿದರು.
ಜಾಥಾ ನಡೆಗೆ ಚಾಲನೆ ನೀಡಿ ಮಾತನಾಡಿದ ಎಸ್. ವಿ. ಸಂಕನೂರ, ಯೋಗದ ವಿದ್ಯೆ ನಮ್ಮ ದೇಶದ ಋಷಿ ಮುನಿಗಳಿಂದ ಬಂದಂತಹ ವಿದ್ಯೆ. ಈ ವಿದ್ಯೆ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾಗಿದೆ ಮತ್ತು ವಿದೇಶಗಳಲ್ಲಿಯೂ ಸಹ ಹೆಚ್ಚು ಆಸಕ್ತಿಯಿಂದ ಯೋಗಾಭ್ಯಾಸ ಮಾಡುತ್ತಿರುವುದು ನಮ್ಮ ಯೋಗದ ಬಗ್ಗೆ ಹೆಮ್ಮೆ ಎನಿಸುತ್ತದೆ. ಈ ಯೋಗವನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಅನ್ನಪೂರ್ನ ಎಂ ಮಾತನಾಡಿ, ಯೋಗ ನಡಿಗೆ ಮೂಲಕ ವಿದ್ಯಾಥಿರ್ಗಳು, ಎಲ್ಲ ವೈದ್ಯಕಿಯ ವಿದ್ಯಾಥಿರ್ಗಳು, ವಿವಿಧ ಯೋಗ ತರಬೇತಿ ಸಂಸ್ಥೆಗಳು ಒಂದೆಡೆ ಸೇರಿ ಯೋಗ ನಡಿಗೆಯಲ್ಲಿ ಪಾಲ್ಗೊಂಡಿರುವುದು ಮತ್ತು ಆಯುಷ್ ಇಲಾಖೆ ಈ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾನೀಯ ಎಂದರು.
ಡಾ. ಕಮಲಾ ಅಂಗಡಿ ಮಾತನಾಡಿ, ಇಂದಿನ ಆಧುನಿಕ ಒತ್ತಡ ಜೀವನದಲ್ಲಿ ಯೋಗ ಅತ್ಯಂತ ಉಪಯುಕ್ತವಾಗಿದೆ. ಶಾಲಾ ವಿದ್ಯಾಥಿರ್ಗಳು, ಯುವಕರು, ವಯೋವೃದ್ಧರು ತಮ್ಮ ವಯಸ್ಸಿನ ತಕ್ಕಂತೆ ಯೋಗಾಭ್ಯಾಸವನ್ನು ಪ್ರತಿನಿತ್ಯ ಮಾಡುವುದರಿಂದ ನಮ್ಮ ಆರೋಗ್ಯವು ಉತ್ತಮ ರೀತಿಯಲ್ಲಿ ಇರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಮಲ್ಲಿಕಾರ್ಜುನ ಉಪ್ಪಿನ, ಡಾ. ಸಂಜೀವ ನಾರಪ್ಪನವರ, ಡಿಡಿಪಿಐ ಎಂ. ಎ. ರಡ್ಡೇರ, ಆರ್. ಎಸ್. ಬುರಡಿ, ವಿ. ವಿ. ನಡುವಿನಮನಿ, ಜಗದೀಶ ಜಿ. ಎಂ., ಶ್ಯಾಮ ಲಾಂಡೆ ಹಲವರು ಇದ್ದರು.