

ಮೈಸೂರು: ವಿಶ್ವ ಯೋಗ ದಿನದ ಅಂಗವಾಗಿ ಅರಮನೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ, ಅರಮನೆ ಮಂಡಳಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮೈಸೂರು ಯೋಗ ಒಕ್ಕೂಟ ವತಿಯಿಂದ ಬುಧವಾರ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಯೋಗಪಟುಗಳು ಭಾಗಿಯಾದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ಯೋಗದಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ಮೈಸೂರಿನಲ್ಲಿ ಯೋಗ ಚಟುವಟಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಮೈಸೂರು ಯೋಗ ನಗರಿಯಾಗಿ ಗುರುತಿಸಿಕೊಂಡಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಮಾತನಾಡಿ, ನಾನು ಚಿಕ್ಕವನಾಗಿದ್ದಾಗ ನಟ ಡಾ. ರಾಜಕುಮಾರ್ ಅವರ ಯೋಗ ವನ್ನು ನೋಡುತ್ತಿದ್ದೆ. ಯೋಗ ಮಾಡುವುದರಿಂದ ದೇಹಕ್ಕೆ ತೇಜಸ್ಸು ದೊರೆಯತ್ತದೆ. ಯೋಗದಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಬಹುದು. ದಿನವಿಡೀ ಉಲ್ಲಾಸದಿಂದ ಇರಲು ಸಹಕಾರಿಯಾಗುತ್ತದೆ. ದೇಶ ಕಾಯುವ ಸೈನಿಕರಿಗೂ ಯೋಗ ಮಾಡಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಮಾತನಾಡಿ, ಯೋಗದ ಮಹತ್ವ ಇದೀಗ ವಿಶ್ವಕ್ಕೆ ತಿಳಿದಿದೆ. ಮೈಸೂರು ಯೋಗಕ್ಕೆ ಪ್ರಸಿದ್ಧಿ ಪಡೆದ ನಗರವಾಗಿದ್ದು, ನಗರ ಯೋಗದಲ್ಲಿ ಗಿನ್ನೆಸ್ ದಾಖಲೆ ನಿರ್ಮಾಣ ಮಾಡಿತ್ತು. ಎಲ್ಲ ಯೋಗ ಸಂಘ ಸಂಸ್ಥೆಗಳು ಯೋಗ ಬೆಳೆಸುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಮತ್ತೊಮ್ಮೆ ಯೋಗದಲ್ಲಿ ಮೈಸೂರು ಗಿನ್ನಿಸ್ ದಾಖಲೆ ನಿರ್ಮಾಣ ಮಾಡಬೇಕು ಎಂದು ಹೇಳಿದರು.
ಶ್ರೀ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯೋಗ ಮನಸ್ಸನ್ನು ಹಿಡಿತದಲ್ಲಿ ಇಡುತ್ತಡೆ. ವಿಶ್ವದ 186 ದೇಶಗಳಲ್ಲಿ ಯೋಗ ಸ್ಥಾನ ಪಡೆದಿದೆ ಎಂದು ಹೇಳಿದರು.
ಶಂಕ ನಾದದ ಮೂಲಕ ಯೋಗ ಪ್ರಾರಂಭಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಎಂ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಹಾಗೂ ಇತರರು ಇದ್ದರು.
ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಯೋಗ ದಿನ ಕಾರ್ಯಕ್ರಮದಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ಹಾಗೂ ಸಚಿವರು ಗೈರು ಹಾಜರಾದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಪಶು ಸಂಗೋಪನೆ ಸಚಿವ ಕೆ. ವೆಂಕಟೇಶ್, ಶಾಸಕರಾದ ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ, ಡಿ. ರವಿಶಂಕರ್ ಆಹ್ವಾನಿತರಾಗಿದ್ದರು. ಆದರೆ, ಕಾಂಗ್ರೆಸ್ ಶಾಸಕರು ಸಾಮೂಹಿಕವಾಗಿ ಗೈರು ಹಾಜರಾದರು. ವಿಧಾನ ಪರಿಷತ್ ಸದಸ್ಯ, ಜೆಡಿಎಸ್‌ನ ಸಿ.ಎನ್. ಮಂಜೇಗೌಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ, ಜೆಡಿಎಸ್ ಶಾಸಕರಾದ ಜಿ.ಟಿ. ದೇವೇಗೌಡ, ಜಿ.ಡಿ. ಹರೀಶ್ ಗೌಡ ಗೈರು ಹಾಜರಾದರು.