ಯೋಗ ದಿನಾಚರಣೆ ವ್ಯವಸ್ಥಿತವಾಗಿ ನಡೆಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

Yoga Day Pre Meeting Mandya
Published on

ಮಂಡ್ಯ: ಜಿಲ್ಲೆಯಲ್ಲಿ ಜೂ.21ರಂದು 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ವ್ಯವಸ್ಥಿತವಾಗಿ ನಡೆಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.

ನಗರದ ಜಿಲ್ಲಾ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಗದಿಂದ ಆರೋಗ್ಯ ವೃದ್ಧಿಯಾಗುವುದರ ಜತೆಗೆ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಬೆಳಸುತ್ತದೆ. ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನವನ್ನು ‘ಒಂದು ಭೂಮಿ ಒಂದು ಆರೋಗ್ಯ’ ಘೋಷ ವಾಕ್ಯದಡಿ ಆಚರಿಸಲಾಗುತ್ತಿದೆ. ಆದ್ದರಿಂದ ಹಸಿರು ಯೋಗ ಮತ್ತು ಯೋಗ ಧನುಷ್ ಕಾರ್ಯಕ್ರಮವನ್ನು ಸಹ ಆಯೋಜಿಸಬೇಕಿದ್ದು, ಹಸಿರು ಯೋಗವನ್ನು ಅರಣ್ಯ ಇಲಾಖೆ ಸಹಕಾರದೊಂದಿಗೆ ಯೋಗ ಮುಗಿದ ನಂತರ ಗಿಡ ನೆಡುವ ಮೂಲಕ ಆಯೋಜಿಸಿ ಎಂದರು.

ಯೋಗ ಧನುಷ್ ’್ಗ ಆ್ಟಛಿ ್ಗಟಜ ಅ’ ಮೂಲಕ ಕೆಎಸ್‌ಆರ್‌ಟಿಸಿ ನೌಕರರು, ಕೈದಿಗಳಿಗೆ, ದಿವ್ಯಾಂಗರಿಗೆ, ವಾಣಿಜ್ಯ ಕೈಗಾರಿಕೆಗಳ ಕಾರ್ಮಿಕರಿಗೆ ಸೇರಿದಂತೆ ಹೆಚ್ಚಿನ ಜನರಿಗೆ ಯೋಗವನ್ನು ತಲುಪಿಸಲು 10 ರಿಂದ 15 ನಿಮಿಷದ ಯೋಗ ಕಾರ್ಯಕ್ರಮ ರೂಪಿಸಲಾಗಿದೆ. ಇದರಲ್ಲಿ ಮದ್ದೂರು ಭಾಗದ ಕೈಗಾರಿಕಾ ಪ್ರದೇಶದಲ್ಲಿರುವ ಗಾರ್ಮೆಂಟ್ಸ್ ಕಾರ್ಮಿಕರಿಗೆ ವಿಶೇಷವಾಗಿ ಆಯೋಜಿಸಿ ಎಂದರು.

21ರಂದು ಯೋಗಾಭ್ಯಾಸವನ್ನು ಪಿಇಟಿ ಮೈದಾನದಲ್ಲಿ ಬೆಳಗ್ಗೆ 7 ಗಂಟೆಯಿಂದ 7.45 ರವರೆಗೆ ನಿಗದಿತ ಸಮಯಕ್ಕೆ ನಡೆಯುವಂತೆ ಸಂಘಟಿಸಬೇಕು. ಬೆಳಗ್ಗೆ 6 ಗಂಟೆಗೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಎಲ್ಲರೂ ಆಗಮಿಸಬೇಕು. 6.30ಕ್ಕೆ ವೇದಿಕೆ ಕಾರ್ಯಕ್ರಮ ಆರಂಭವಾಗುವ ರೀತಿ ಕಾರ್ಯಕ್ರಮವನ್ನು ಆಯೋಜಿಸಿ. ಶಾಲಾ ಕಾಲೇಜು ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳು, ಮಹಿಳಾ ಸಂಘಟನೆಗಳು, ಯೋಗಶಾಲೆಗಳು ಸೇರಿದಂತೆ 6000ಕ್ಕೂ ಹೆಚ್ಚಿನ ಜನರು ಯೋಗ ದಿನಾಚರಣೆಯಲ್ಲಿ ಭಾಗವಹಿಸುವ ರೀತಿ ಕಾರ್ಯಕ್ರಮ ಸಂಘಟಿಸಿ ಎಂದು ಹೇಳಿದರು.

5 ಜನ ಯೋಗ ಶಿಕ್ಷಕರನ್ನು ಮೇಲುಸ್ತುವಾರಿಗಳಾಗಿ ನೇಮಿಸಿ. ಅವರು ಯೋಗ ದಿನಾಚರಣೆಯಲ್ಲಿ ಭಾಗವಹಿಸುವವರಿಗೆ ಎರಡು ಅಥವಾ ಮೂರು ದಿನಗಳ ಕಾಲ ಪೂರ್ವಾಭ್ಯಾಸ ನೀಡಲಿ. ಇದರಿಂದ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಮೂಡಿ ಬರಲಿದೆ. ಕಾರ್ಯಕ್ರಮದ ದಿನದಂದು ದೈಹಿಕ ಶಿಕ್ಷಣ ಶಿಕ್ಷಕರಿಗೆ ಜವಾಬ್ದಾರಿ ನೀಡಿ. ದಿನಾಚರಣೆಯಂದು ಸರಿಯಾದ ಕ್ರಮದಲ್ಲಿ ಸಾಲು ನಿಲ್ಲಿಸಲು ಸೂಚಿಸಿ. ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಕಲ್ಪಿಸಲಾಗುವುದು. ಆರೋಗ್ಯ ಇಲಾಖೆಯಿಂದ ಆಂಬ್ಯುಲೆನ್ಸ್ ಸೇವೆ, ಪ್ರಥಮ ಚಿಕಿತ್ಸೆ ಹಾಗೂ ರಕ್ತದಾನ ಶಿಬಿರ ಏರ್ಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಪುಷ್ಪಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಮೂರ್ತಿ, ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net