

ಮಂಡ್ಯ: ಜಿಲ್ಲಾಡಳಿತ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಗ ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ. ಇಂದಿನ ಒತ್ತಡದ ಜೀವನದಲ್ಲಿ ಅನೇಕ ರೋಗಗಳ ಪರಿಹಾರಕ್ಕೆ ಯೋಗವನ್ನು ಜೀವನ ಪದ್ಧತಿಯಾಗಿ ಅಳವಡಿಸಿಕೊಳ್ಳಬೇಕು ಎಂದರು.
21ರಂದು ಬೆಳಗ್ಗೆ 6.30ಕ್ಕೆ ಉದ್ಘಾಟನೆ, 7 ರಿಂದ 8 ಗಂಟೆವರೆಗೆ ಯೋಗ ಪ್ರದರ್ಶನ ಇರುತ್ತದೆ. ಇದರಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ, ಯೋಗ ಹಾಗೂ ಇತರ ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಭಾಗವಹಿಸಲಿದ್ದಾರೆ. ಮಳೆಗಾಲವಾಗಿರುವುದರಿಂದ ಈ ಬಾರಿ ಒಳಾಂಗಣದಲ್ಲಿ ಯೋಗಾಭ್ಯಾಸ ನಡೆಸುವುದು ಉತ್ತಮ. ಸುಮಾರು 750 ರಿಂದ 1000 ಜನ ಯೋಗಾಭ್ಯಾಸ ಮಾಡುವ ಸಭಾಂಗಣವನ್ನು ಗುರುತಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಯೋಗ ದಿನಾಚರಣೆ ದಿನದಂದು ಪಾಲ್ಗೊಳ್ಳುವವರಿಗೆ ಮೊದಲೇ ಯೋಗದ ಆಸನಗಳ ವಿವರ ನೀಡಿ ಪೂರ್ವಾಭ್ಯಾಸ ಮಾಡಿಸಿ. ಇದರಿಂದ ಕಾರ್ಯಕ್ರಮ ಉತ್ತಮವಾಗಿ ಮೂಡಿಬರಲಿದೆ. ಆಯುಷ್ ಇಲಾಖೆ ಮೂಲಕ ಈ ಕಾರ್ಯಕ್ರಮ ಸಂಘಟಿಸಲಾಗುತ್ತದೆ. ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಕೇಂದ್ರ ಸಚಿವರು, ಸೇರಿದಂತೆ ಜನಪ್ರತಿನಿಧಿಗಳನ್ನು ಶಿಷ್ಠಾಚಾರದಂತೆ ಆಹ್ವಾನಿಸುವಂತೆ ನಿರ್ದೇಶನ ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಕಾರ್ಯಕ್ರಮ ಶಿಸ್ತು ಬದ್ಧವಾಗಿ ನಡೆಯಬೇಕು. ಭಾಗವಹಿಸುವ ಯೋಗಪಟು ಹಾಗೂ ವಿದ್ಯಾರ್ಥಿಗಳಿಗೆ ಅವಶ್ಯಕವಿದ್ದಲ್ಲಿ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಾರಿಗೆ ವ್ಯವಸ್ಥೆ ಹಾಗೂ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಿ. ಜೂ.13 ರಿಂದ 20 ರವರೆಗೆ ವಿವಿಧ ಸ್ಥಳಗಳಲ್ಲಿ ಪ್ರತಿದಿನ ಬೆಳಗ್ಗೆ 8 ರಿಂದ 9 ರವರೆಗೆ ಯೋಗೋತ್ಸವ ನಡೆಯಲಿದೆ. ಆಯುಷ್ ಇಲಾಖೆಯ ಯೋಗ ತರಬೇತುದಾರರು ಭಾಗವಹಿಸಿ ಯೋಗದ ಆಸನಗಳನ್ನು ಪರಿಚಯಿಸಿ ತರಬೇತಿ ನೀಡಲಿದ್ದಾರೆ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಸ್.ಸೀತಾಲಕ್ಷ್ಮೀ ಮಾತನಾಡಿ, 13ರಂದು ಫ್ಯಾಕ್ಟರಿ ಸರ್ಕಲ್ ಹತ್ತಿರ ಇರುವ ಸೆಂಟ್‌ಜಾನ್ ಶಾಲೆಯಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳಿಗೆ, 14ರಂದು ಜಿಲ್ಲೆಯ ಆಯುಷ್ ಆಸ್ಪತ್ರೆ, ಚಿಕಿತ್ಸಾಲಯ ಹಾಗೂ 27 ಆಯುಷ್ಮಾನ್ ಕೇಂದ್ರದಲ್ಲಿ, 15ರಂದು ಸರ್ಕಾರಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ, 16ರಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ವಸತಿ ನಿಲಯದ ವಿದ್ಯಾರ್ಥಿಗಳಿಗೆ, 17ರಂದು ಎಸ್.ಪಿ.ವೈ.ಎಸ್.ಎಸ್ ಸಂಸ್ಥೆ ಸಹಯೋಗದೊಂದಿಗೆ ಗಾಯಿತ್ರಿ ಭವನದಲ್ಲಿ, 18ರಂದು ಮಿಮ್ಸ್ ಸಭಾಂಗಣದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಗೆ, 19ರಂದು ಪೊಲೀಸ್ ಕವಾಯತು ಮೈದಾನದಲ್ಲಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ, 20ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಯೋಗಾಭ್ಯಾಸವನ್ನು ಸಂಘಟಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಪೊಲೀಸ್ ವರಿಷ್ಠಾಧಿಕಾರಿ-2 ಗಂಗಾಧರಸ್ವಾಮಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಾಘವೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂಪ್ರಕಾಶ್ ಹಾಗೂ ವಿವಿಧ ಯೋಗ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.