

ಹುಬ್ಬಳ್ಳಿ: ಪತಂಜಲಿ ಯೋಗ ಸಮಿತಿ ಕರ್ನಾಟಕ ಮತ್ತು ಹುಬ್ಬಳ್ಳಿ ಪತಂಜಲಿ ವೆಲ್‌ನೆಸ್ ಆಶ್ರಯದಲ್ಲಿ ಇಲ್ಲಿಯ ಮುಕುಂದ ನಗರದ ಪತಂಜಲಿ ವೆಲ್ ನೆಸ್‌ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ- 2025ರ ಪೂರ್ವಭಾವಿ ಯೋಗ ಶಿಬಿರ ಹಾಗೂ ಯೋಗ ಸಪ್ತಾಹವನ್ನು ಬುಧವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಪತಂಜಲಿ ಯೋಗ ಪೀಠದ ರಾಜ್ಯ ಪ್ರಭಾರಿ, ಅಂತಾರಾಷ್ಟ್ರೀಯ ಯೋಗ ಗುರು ಭವರಲಾಲ್ ಆರ್ಯ ಅವರು ಭಾರತ ಸರ್ಕಾರದ ಆಯುಷ್ ಇಲಾಖೆ ನಿಗದಿಪಡಿಸಿದ ಯೋಗ ಪ್ರೊಟೋಕಾಲ್ ಪ್ರಕಾರ ಅಭ್ಯಾಸ ಮಾಡಿಸಿ ಮಾತನಾಡಿ, ಭಾರತ ಸರ್ಕಾರದ ಆಯುಷ್ ಇಲಾಖೆ ಈ ಬಾರಿ ಒಂದು ಲಕ್ಷ ಕಡೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಣೆ ಮಾಡಲು ತಯಾರಿ ನಡೆಸಿದೆ. ಕರ್ನಾಟಕದಲ್ಲಿ ಐದು ಸಾವಿರ ಸ್ಥಳಗಳಲ್ಲಿ ಪತಂಜಲಿ ವತಿಯಿಂದ ಯೋಗ ದಿನವನ್ನು ಆಚರಿಸಲಿದ್ದೇವೆ. ಹುಬ್ಬಳ್ಳಿ-ಧಾರವಾಡದಲ್ಲಿ 200 ಸ್ಥಳಗಳಲ್ಲಿ ಯೋಗ ದಿನ ಆಚರಿಸಲಿದ್ದೇವೆ. ಪ್ರೊಟೋಕಾಲ್ ಅಭ್ಯಾಸದ ಲ್ಯಾಮಿನೇಟೆಡ್ ಯೋಗ ಚಾರ್ಟ್ ತಯಾರಿಸಿ ಎಲ್ಲರಿಗೆ ವಿತರಿಸಲಾಗಿದೆ ಎಂದರು.
ಪತಂಜಲಿ ವೆಲ್‌ನೆಸ್ ಸಂಸ್ಥಾಪಕ ರಮೇಶ ಬಾಫಣಾ ಮಾತನಾಡಿ, ಉಚಿತ ಯೋಗ ಮತ್ತು ಆರೋಗ್ಯದ ಸೇವೆ ಎಲ್ಲಿಯೇ ನಡೆದರೂ ನಮ್ಮ ಪತಂಜಲಿ ವೆಲ್ನೆಸ್ ಮತ್ತು ಎಂಡಬ್ಲ್ಯುಬಿ ಸಂಸ್ಥೆ ವತಿಯಿಂದ ಸದಾಕಾಲ ಸಹಕಾರ ನೀಡುತ್ತೇವೆ ಎಂದರು.
ಪತಂಜಲಿ ವೆಲ್‌ನೆಸ್‌ನಲ್ಲಿ ಜೂ. 21ರಂದು ಬೆಳಗ್ಗೆ 6 ಗಂಟೆಗೆ 11ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುವುದು ಎಂದರು.
ಪತಂಜಲಿ ಪರಿವಾರ ಹುಬ್ಬಳ್ಳಿ-ಧಾರವಾಡದ ವಾಮನ್ ಶಾನಭಾಗ್, ಪೂರ್ಣಿಮಾ ಹರವಿ, ಪಂಕಜ ತರ್ಲಗಟ್ಟಿ, ಗೀತಾ ಕಮ್ಮಾರ, ಹರ್ಷಿತಾ, ರಮೇಶ ಶೆಟ್ಟಿ, ರಾಜಶೇಖರ ಕುದುರಿ, ಶಿವಾನಂದ, ಸುಭಾಷ, ಮುತ್ತಪ್ಪ, ರೇಖಾ, ಲಕ್ಷ್ಮೀ, ಜಗದೀಶ, ಗೋಪಾಲ, ಡಾಲರಾಮ್, ಗೀತಿಕಾ, ಪತಂಜಲಿ ವೆಲ್ನೆಸ್‌ನ ಡಾ. ರಾಘವೇಂದ್ರ, ಡಾ. ರಾಮ್, ಮಧುಸೂದನ, ಜ್ಯೋತಿ, ಲೀಲಾವತಿ, ರಾಯಚೂರಿನ ಕಾಂಬಳೆ ದಂಪತಿ ಉಪಸ್ಥಿತರಿದ್ದರು.