ಅಪರಾಧಗಳ ನಿಯಂತ್ರಣಕ್ಕಾಗಿ ಹೊಸ ಕಾನೂನು ಜಾರಿ: ಹಿರಿಯ ಶ್ರೇಣಿ ನ್ಯಾಯಾಧೀಶ ಆನಂದ್ ಮಾಹಿತಿ

Yoga Day in Jail Mandya
Published on

ಮಂಡ್ಯ: ಅಪರಾಧಗಳ ನಿಯಂತ್ರಣಕ್ಕಾಗಿ ಹೊಸ ಹೊಸ ಕಾನೂನುಗಳು ಜಾರಿಯಾಗುತ್ತಿದ್ದು, ಶಿಕ್ಷೆಯ ಪ್ರಮಾಣ ಹೆಚ್ಚಿಸಲಾಗಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಆನಂದ್ ಹೇಳಿದರು.

ನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ, ರೋಟರಿ ಇನ್ನರ್‌ವ್ಹೀಲ್, ಪತಂಜಲಿ ಯೋಗ ಶಿಕ್ಷಣ ಸಮಿತಿ, ಅನನ್ಯ ಹಾರ್ಟ್ ಸಂಸ್ಥೆ, ವಿಶ್ವಜ್ಞಾನಿ ಸೇವಾ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಕಾನೂನುಬಾಹಿರ ಚಟುವಟಕೆಗಳನ್ನು ನಿಯಂತ್ರಿಸಲು ಹೊಸ ಕಾನೂನುಗಳು ಜಾರಿಯಾಗುತ್ತಿವೆ. ಶಿಕ್ಷೆಯ ಪ್ರಮಾಣ ಮರಣದಂಡನೆವರೆಗೂ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ಜು.1ರಿಂದ ಹೊಸ ಕಾನೂನು ಜಾರಿಯಾಗಲಿದ್ದು, ಜೈಲು ಶಿಕ್ಷೆ 3 ರಿಂದ 7 ವರ್ಷಕ್ಕೆ ವಿಸ್ತರಿಸಲಾಗಿದೆ. ಅಂತೆಯೇ 50 ಸಾವಿರ ರೂನಿಂದ 10 ಲಕ್ಷ ರೂವರೆಗೂ ದಂಡ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಕಾನೂನು ಮತ್ತಷ್ಟು ಕಠಿಣವಾಗಲಿದೆ. ಇದರಿಂದ ಅಪರಾಧಗಳನ್ನು ತಡೆಯಲು ಸಾಧ್ಯವಾಗುತ್ತದೆ ಎನ್ನುವುದು ಸರ್ಕಾರದ ಸದುದ್ದೇಶ. ಜೈಲಿನಲ್ಲಿರುವ ವಿಚಾರಣಾ ಕೈದಿಗಳಿಗೆ ಸರ್ಕಾರ ಎಲ್ಲ ಸೌಲಭ್ಯ ಸವಲತ್ತುಗಳನ್ನು ನೀಡಿದೆ. ಇಲ್ಲಿಗೆ ಬಂದ ಬಳಿಕ ಮನಃಪರಿವರ್ತನೆಯಾಗಿ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕ ಸ್ವಾಸ್ಥತೆಯನ್ನು ಕಲಿಯಬೇಕು. ಯೋಗ ಪ್ರತಿಯೊಬ್ಬರಿಗೂ ಅವಶ್ಯ. ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿದರೆ ಉಲ್ಲಾಸ, ಚೈತನ್ಯ ಲಭ್ಯವಾಗಿ ಆರೋಗ್ಯದಿಂದ ಇರಬಹುದು. ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮತೋಲನದಲ್ಲಿ ಇರುತ್ತದೆ. ಎಲ್ಲರೂ ಅಭ್ಯಾಸ ಮಾಡಿ, ಉತ್ತಮ ಮನುಷ್ಯರಾಗಿ ಬಾಳಿ ಎಂದು ಹೇಳಿದರು.

ಅನನ್ಯ ಹಾರ್ಟ್ ಸಂಸ್ಥೆ ಅಧ್ಯಕ್ಷೆ ಬಿ.ಎಸ್.ಅನುಪಮಾ ಮಾತನಾಡಿ, ಇಂದಿನ ದಿನಗಳಲ್ಲಿ ಜೈಲು ವಿಚಾರಣಾ ಕೈದಿಗಳ ಪರಿವರ್ತನಾ ಕೇಂದ್ರವಾಗಿದೆ. ಮಾನಸಿಕ ಸೀಮಿತ ಕಳೆದುಕೊಂಡು, ಅರಿತೋ ಅರಿಯದೆಯೋ ತಪ್ಪು ಮಾಡಿ ಇಲ್ಲಿಗೆ ಬಂದಿದ್ದೀರಿ. ಮನಃಪರಿವರ್ತನೆಯಿಂದ ಎಲ್ಲ ಸಾಧ್ಯವಿದೆ ಎಂದು ತಿಳಿಸಿದರು.

ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ.ಲೋಕೇಶ್, ರೋಟರಿ ವಿನ್ನರ್‌ವ್ಹೀಲ್ ಅಧ್ಯಕ್ಷೆ ಸುಮಾ ಅನಂತು, ಯೋಗಗುರು ವಿಜಯಾ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಮುಖಸ್ಥ ತಿಮ್ಮರಾಜು, ಜೈಲರ್ ರವಿಕುಮಾರ್ ಭಜಂತ್ರಿ, ಅಕ್ಷಯಸಿರಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಲೋಕೇಶ್, ವಿಶ್ವಜ್ಞಾನಿ ಸೇವಾ ಟ್ರಸ್ಟ್ ಅಧ್ಯಕ್ಷ ತಾಳಶಾಸನ ಮೋಹನ್, ಮನೋಶಾಸ್ತ್ರಜ್ಞ ಸಾಹುಲ್ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಿಚಾರಣಾ ಕೈದಿಗಳಿಂದ ಯೋಗ ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net