

ಗದಗ: ದೇಶಕ್ಕೆ ಸೀಮಿತವಾಗಿದ್ದ ಯೋಗ ವಿದ್ಯೆಯನ್ನು ವಿಶ್ವಕ್ಕೆ ಪರಿಚಯಿಸಿದವರು ಪ್ರಧಾನಿ ನರೇಂದ್ರ ಮೋದಿಯವರು. ಯೋಗ ಶಾಸ್ತ್ರ ಸ್ವದೇಶೀಯವಾದ ವಿದ್ಯೆಯಾಗಿದೆ. ಜಾಗತಿಕ ವಿಶ್ವ ಶಾಂತಿಗಾಗಿ ಯೋಗ ದಿನಾಚರಣೆ ಆಚರಣೆಗೆ ಬಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ನಗರಸಭೆ ಗದಗ-ಬೆಟಗೇರಿ ಇವರ ಸಹಯೋಗದಲ್ಲಿ ವಸುದೈವ ಕುಟುಂಬಕಂ ಹಾಗೂ ಪ್ರತಿ ಮನೆಮನೆ ಅಂಗಳದಲ್ಲಿ ಯೋಗ ಎಂಬ ಘೋಷವಾಕ್ಯದೊಂದಿಗೆ ಏರ್ಪಡಿಸಲಾದ ೯ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೂನ್ ೨೧ನ್ನು ವಿಶ್ವ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ. ಇಂದು ಯೋಗದ ಮಹತ್ವ ಹಾಗೂ ಅದನ್ನು ದಿನಂಪ್ರತಿ ಜೀವನದಲ್ಲಿ ಅಳವಡಿಸಿಕೊಳ್ಳುವದರಿಂದಾಗುವ ಪ್ರಯೋಜನಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ಜಗತ್ತಿನ ೨೭೨ ರಾಷ್ಟ್ರಗಳು ಇಂದು ಯೋಗ ದಿನಾಚರಣೆಯನ್ನು ಆಚರಣೆ ಮಾಡುತ್ತಿರುವುದು ರಾಷ್ಟ್ರಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು.
ರೋಗಮುಕ್ತ ಬದುಕಿಗೆ ಯೋಗ ಸಹಕಾರಿ. ಜಿಲ್ಲೆಯಲ್ಲಿ ಸಾಕಷ್ಟು ಜನಯೋಗ ಗುರುಗಳಿದ್ದಾರೆ. ಅವರಿಗೆ ಯೋಗದಿಂದ ಏನೆಲ್ಲ ಅನುಕೂಲತೆಗಳಿವೆ ಎಂದು ಗೊತ್ತಿದ್ದು ಅದನ್ನು ಯೋಗಾಸಕ್ತರಿಗೆ ದಿನಂಪ್ರತಿ ಕಲಿಸುತ್ತಾರೆ. ದಿನನಿತ್ಯ ಪ್ರತಿಯೊಬ್ಬರೂ ಲವಲವಿಕೆಯಿಂದ, ಉತ್ಸಾಹದಿಂದ ಕಾರ್ಯನಿರ್ವಹಿಸಲು ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಪ್ರಧಾನಿ ನರೇಂದ್ರ ಮೋದಿ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಉಷಾ ದಾಸರ,ಉಪಾಧ್ಯಕ್ಷೆ ಸುನಂದಾ ಬಾಕಳೆ, ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ, ಉಪವಿಭಾಗಾಧಿಕಾರಿ ಅನ್ನಪೂರ್ಣ ಎಂ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವಲಿಂಗಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕರಿಸಿದ್ಧಪ್ಪ, ಕ್ರೀಡಾಧಿಕಾರಿ ವಿಠ್ಠಲ ಜಾಬಗೌಡ್ರ ಸೇರಿದಂತೆ ಇತರರು ಇದ್ದರು.
ವೇದಿಕೆ ಕಾರ್ಯಕ್ರಮದ ನಂತರ ಕೆ.ಎಚ್.ಪಾಟೀಲ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ಮುಖ್ಯಸ್ಥ ಸತೀಶ ಅವರು ನೆರೆದ ಯೋಗಾಸಕ್ತರಿಗೆ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಯೋಗಾಭ್ಯಾಸ ಹೇಳಿಕೊಟ್ಟರು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಮಲ್ಲಿಕಾರ್ಜುನ ಉಪ್ಪಿನ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಅಶೋಕ ಮತ್ತಿಕಟ್ಟಿ ಯೋಗ ಪ್ರಾರ್ಥನೆ ಮಾಡಿದರು. ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ೨೦೦೦ ಕ್ಕೂ ಅಧಿಕ ಯೋಗಾಸಕ್ತರು ಪಾಲ್ಗೊಂಡಿದ್ದರು.