ವಿಜಯವಾಣಿ ಸಹಯೋಗದಲ್ಲಿ ಯೋಗ ದಿನಾಚರಣೆ

Yoga Day celebration in collaboration with Vijayavani
Published on

ಮಡಿಕೇರಿ:

ಯೋಗವು ದೇಹವನ್ನು ಮನಸ್ಸು ಮತ್ತು ಆತ್ಮಗಳೊಡನೆ ಬೆಸೆಯುವಲ್ಲಿ ಸಹಕರಿಸುತ್ತದೆ ಎಂದು ಯೋಗ ಶಿಕ್ಷಕ ಕೆ.ಕೆ. ಮಹೇಶ್ ಕುಮಾರ್ ಹೇಳಿದರು. ನಂ.೧ ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಮಡಿಕೇರಿ ಸರ್ಕಾರಿ ಜೂನಿಯರ್ ಕಾಲೇಜು ವತಿಯಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಸರಳ ಯೋಗಾಸನಗಳನ್ನು ಹೇಳಿಕೊಟ್ಟ ನಂತರ ಮಾತನಾಡಿದರು.

ಯೋಗ ಭಾರತೀಯ ಸಂಸ್ಕೃತಿಯ ಹಿರಿಮೆ, ಗರಿಮೆಗಳ ಸಾಕಾರ ರೂಪವಾಗಿದೆ. ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿರುವ ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸಿ ಸಾತ್ವಿಕ ಮನಸ್ಸು ಬೆಳೆಸಿಕೊಳ್ಳುವಂತಾಗಬೇಕು. ಯೋಗಾಭ್ಯಾಸ ಒತ್ತಡ ನಿವಾರಿಸುತ್ತದೆ. ಜೀವನದ ಅಂತಿಮ ಗುರಿಯಾದ ಆತ್ಮ ಸಾಕ್ಷಾತ್ಕಾರವನ್ನು ಸಿದ್ಧಿಸಿಕೊಳ್ಳಲು ನೆರವಾಗುತ್ತದೆ. ಕಳೆದ ೧೦ ವರ್ಷಗಳ ಹಿಂದೆ ಆರಂಭವಾದ ಯೋಗ ದಿನಾಚರಣೆ ಈಗ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ ಎಂದರು.

ಯೋಗ ದಿನದ ಮಹತ್ವದ ಬಗ್ಗೆ ಮಾತನಾಡಿದ ಕಾಲೇಜಿನ ವಿದ್ಯಾರ್ಥಿನಿ ಶಿಲ್ಪಾ, ಯೋಗ ನಮ್ಮ ಜೀವನ ಶೈಲಿಯ ಪ್ರಮುಖ ಭಾಗವಾಗಿದೆ. ಯೋಗದ ಬಗ್ಗೆ ಹೆಚ್ಚು ಹೆಚ್ಚು ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂ. ೨೧ರಂದು ಅಂತಾರಾಷ್ಟ್ರೀಯ ಯೋಗ ದಿನ ಎಂದು ಆಚರಿಸಲಾಗುತ್ತದೆ. ಯೋಗ ಭಾರತ ದೇಶವು ಜಗತ್ತಿಗೆ ನೀಡಿದ ಅದ್ಭುತ ಕೊಡುಗೆಯಾಗಿದೆ. ಇದು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಕಲೆಯಾಗಿದೆ. ಪತಂಜಲಿ ಋಷಿಯ ಚಿಂತನೆಯ ಫಲವಾಗಿ ಯೋಗ ನಮಗೆ ಪರಿಚಯವಾಗಿದೆ.

ಪ್ರಧಾನಿ ನರೇಂದ್ರ ಮೋದಿ ೨೦೧೪ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ತಮ್ಮ ಭಾಷಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಬಗ್ಗೆ ಪ್ರಸ್ತಾಪ ಮಾಡಿದ್ದರು. ಈ ಪ್ರಸ್ತಾವನೆಗೆ ವಿಶ್ವ ಸಂಸ್ಥೆಯ ೧೭೭ ಸದಸ್ಯ ರಾಷ್ಟ್ರಗಳು ಅನುಮೋದನೆ ನೀಡಿದ್ದವು. ಇದರ ಫಲವಾಗಿ ೨೦೧೫ರ ಜೂ. ೨೧ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಮೊದಲಿಗೆ ವಿಶ್ವಾದ್ಯಂತ ಆಚರಿಸಲಾಯಿತು. ಪ್ರತಿವರ್ಷವೂ ಒಂದು ವಿಶೇಷ ಪರಿಕಲ್ಪನೆಯೊಂದಿಗೆ ಯೋಗ ದಿನ ಆಚರಿಸಲಾಗುತ್ತದೆ. ಈ ವರ್ಷ ಮಹಿಳಾ ಸಬಲೀಕರಣಕ್ಕಾಗಿ ಯೋಗ ಎನ್ನುವ ಘೋಷ ವಾಕ್ಯ ಮೊಳಗಿಸಲಾಗಿದೆ ಎಂದು ಹೇಳಿದಳು.

ಕಾಲೇಜು ಪ್ರಾಂಶುಪಾಲ ಪಿ.ಆರ್. ವಿಜಯ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಯುಶ್ ಇಲಾಖೆ ವೈದ್ಯಾಧಿಕಾರಿ ಡಾ. ಅರುಣ್, ರಾಜ್ಯಶಾಸ್ತ್ರ ಉಪನ್ಯಾಸಕ ಚಿದಾನಂದ, ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಅಭಿಲಾಶ್ ಹಾಗೂ ಉಪನ್ಯಾಸಕ ವೃಂದ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಯೋಗ ಶಿಕ್ಷಕ ಕೆ.ಕೆ. ಮಹೇಶ್ ಅವರ ಜತೆಗೆ ಪತಂಜಲಿ ಯೋಗ ಸಂಸ್ಥೆಯ ಸುಧಾಕರ್, ಅನಿತಾ ಕುಮಾರಿ, ಸರಿತಾ ವಿನೋದ್ ಹಾಗೂ ಜನಾರ್ದನ್ ವಿದ್ಯಾರ್ಥಿಗಳಿಗೆ ಸುಮಾರು ೧ ಗಂಟೆ ಕಾಲ ಸರಳ ಯೋಗಾಸನಗಳನ್ನು ಹೇಳಿಕೊಟ್ಟರು. ಪ್ರತಿಯೊಂದು ಆಸನಗಳ ಬಗ್ಗೆಯೂ ಮಾಹಿತಿ ನೀಡಿ, ಅವುಗಳನ್ನು ನಿಯಮಿತವಾಗಿ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಇರಬೇಕಾದ ಏಕಾಗ್ರತೆಯನ್ನು ಧ್ಯಾನ, ಓಂಕಾರದ ಮೂಲಕ ಸಾಧಿಸುವ ವಿಧಾನದ ಬಗ್ಗೆಯೂ ತಿಳುವಳಿಕೆ ನೀಡಿದರು. ಕಾಲೇಜಿನ ಸುಮಾರು ೫೦೦ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net