ಮತ್ತೆ ಅರಮನೆ ಅಂಗಳದಲ್ಲಿ ಯೋಗ..!

Yoga Modi
Published on

ಸದೇಶ್ ಕಾರ್ಮಾಡ್ ಮೈಸೂರು
ಯೋಗದ ಮೂಲಕ ಜಾಗತಿಕವಾಗಿ ಗಮನ ಸೆಳೆಯುತ್ತಿರುವ ಸಾಂಸ್ಕೃತಿಕ ನಗರಿ ಮೈಸೂರು ಈ ಬಾರಿಯ ಯೋಗ ದಿನಾಚರಣೆಗೆ ಸಜ್ಜುಗೊಳ್ಳುತ್ತಿದೆ. ಈ ಬಾರಿಯೂ ಅರಮನೆ ಆವರಣದಲ್ಲಿ ಯೋಗ ದಿನಾಚರಣೆ ಆಚರಿಸಲು ಸಿದ್ಧತೆ ಪ್ರಾರಂಭಗೊಂಡಿದೆ.

ಕಳೆದ ಬಾರಿ ಅರಮನೆ ಆವರಣದಲ್ಲಿ ಹಮ್ಮಿಕೊಂಡಿದ್ದ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ನರೇಂದ್ರ ಮೋದಿ ಭೇಟಿಯಿಂದ ನಗರದಲ್ಲಿ ಯೋಗ ಚಟುವಟಿಕೆಗೆ ಮತ್ತಷ್ಟು ಉತ್ತೇಜನ ದೊರೆಯಿತು. ಕಳೆದ ಬಾರಿ 15 ಸಾವಿರಕ್ಕೂ ಹೆಚ್ಚು ಯೋಗ ಪಟುಗಳು ನರೇಂದ್ರ ಮೋದಿ ಅವರೊಂದಿಗೆ ಯೋಗಾಭ್ಯಾಸ ಮಾಡಿದ್ದರು. ಮೋದಿ ಆಗಮನ ಹಿನ್ನೆಲೆಯಲ್ಲಿ ಕಳೆದ ಬಾರಿ ರೇಸ್‌ಕೋರ್ಸ್ ಮೈದಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ಹಮ್ಮಿಕೊ ಳ್ಳಲು ಉದ್ದೇಶಿಸಲಾಗಿತ್ತು. ಆದರೆ, ಭದ್ರತೆಯ ಕಾರಣದಿಂದ ಅರಮನೆ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು.

ಕಳೆದ ಬಾರಿ ಭದ್ರತೆ ಕಾರಣಕೋಸ್ಕರ ದೊಡ್ಡ ಪ್ರಮಾಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ಹಮ್ಮಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ, ಈ ಬಾರಿ ಸಮಯಾವಕಾಶದ ಕೊರತೆ ಇರುವ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದ ಸಾಮೂಹಿಕ ಯೋಗ ಪ್ರದರ್ಶನ ಕೈಬಿಡಲು ತೀರ್ಮಾ ನಿಸಲಾಗಿದೆ. ಇದರ ಬದಲು ಅರಮನೆ ಆವರಣದಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಸಾಮೂಹಿಕ ಯೋಗ ಪ್ರದರ್ಶನ ಹಮ್ಮಿಕೊಳ್ಳಲು ಮೈಸೂರು ಯೋಗ ಒಕ್ಕೂಟ ಉದ್ದೇಶಿಸಿದ್ದು, ಇದಕ್ಕೆ ಬೇಕಾದ ತಯಾರಿ ಕೈಗೊಂಡಿದೆ.

ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಗಿನ್ನೆಸ್ ದಾಖಲೆ ನಿರ್ಮಿಸಿದ ಮೈಸೂರು ಈ ಬಾರಿಯೂ ಯೋಗದಲ್ಲಿ ಯಾವುದಾದರು ದಾಖಲೆ ನಿರ್ಮಿಸಬಹುದೇ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಆದರೆ, ಯೋಗದಲ್ಲಿ ದಾಖಲೆ ನಿರ್ಮಾಣ ಮಾಡಲು ಮೂರ‌್ನಾಲ್ಕು ತಿಂಗಳ ತಯಾರಿ ನಡೆಸಬೇಕು. ಆದರೆ, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ತಯಾರಿ ನಡೆಸಲು ಸಾಧ್ಯವಾಗಿಲ್ಲ. ದೊಡ್ಡ ಪ್ರಮಾಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ಹಮ್ಮಿಕೊಳ್ಳಲು ಭಾರಿ ಪ್ರಮಾಣದ ಆರ್ಥಿಕ ಸಂಪನ್ಮೂಲದ ಅವಶ್ಯಕತೆ ಇದ್ದು, ಅದನ್ನು ಹೊಂದಿಸಲು ಮೂರ‌್ನಾಲ್ಕು ತಿಂಗಳ ತಯಾರಿಯ ಅವಶ್ಯಕತೆ ಇದೆ. ಆದರೆ, ಸಮಾಯಾವಕಾಶದ ಕೊರತೆ ಹಿನ್ನೆಲೆಯಲ್ಲಿ ಈ ಬಾರಿ ಅರಮನೆ ಆವರಣದಲ್ಲಿ 10 ಸಾವಿರ ಯೋಗ ಪಟುಗಳನ್ನು ಸೇರಿಸಿ ಯೋಗ ದಿನಾಚರಣೆ ನಡೆಸಲು ಉದ್ದೇಶಿಸಲಾಗಿದೆ.

ಯೋಗ ದಿನಾಚರಣೆಗೆ ಸಿದ್ಧತೆ

ಯೋಗ ದಿನಾಚರಣೆಗೆ ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿದೆ. ಈಗಾಗಲೇ ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಮಾಡಿಸಲಾಗುತ್ತಿದ್ದು, ಜೂ.18 ರಂದು ಅರಮನೆ ಆವರಣದಲ್ಲಿ ಎರಡು ಸಾವಿರ ಯೋಗ ಪಟುಗಳನ್ನು ಸೇರಿಸಿ ಸಾಮೂಹಿಕ ಯೋಗ ಪ್ರದರ್ಶನದ ತಾಲೀಮು ನಡೆಸಲಾಗುವುದು. ನಂತರ ಜೂ.21 ರಂದು 10 ಸಾವಿರ ಯೋಗ ಪಟುಗಳನ್ನು ಸೇರಿಸಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಸಾಮೂಹಿಕ ಯೋಗ ಪ್ರದರ್ಶನ ಹಮ್ಮಿಕೊಳ್ಳಲಾಗುವುದು.

ಗಿನ್ನೆಸ್ ದಾಖಲೆಯ ಗರಿ

ನಗರದ ರೇಸ್‌ಕೋರ್ಸ್ ಮೈದಾನದಲ್ಲಿ 2017 ಜೂನ್ 21 ರಂದು ಹಮ್ಮಿಕೊಂಡಿದ್ದ ತೃತೀಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಬರೋಬ್ಬರಿ 55,506 ಯೋಗ ಪಟುಗಳು ಪಾಲ್ಗೊಂಡು ಸಾಮೂಹಿಕ ಯೋಗ ಪ್ರದರ್ಶಿಸುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿದ್ದರು. ಈ ಗಿನ್ನೆಸ್ ದಾಖಲೆಯ ಮೂಲಕ ಮೈಸೂರು ಜಾಗತಿಕವಾಗಿ ಗಮನ ಸೆಳೆಯಿತು. ಈ ಕಾರಣಕ್ಕಾಗಿ ನಗರದಲ್ಲಿ ಯೋಗ ಕಲಿಯಲು ದೇಶ, ವಿದೇಶದಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ನಗರದಲ್ಲಿ ಯೋಗ ವಿಶ್ವ ವಿದ್ಯಾಲಯ ಸ್ಥಾಪಿಸಬೇಕು ಎಂಬ ಒತ್ತಾಯ ಕೂಡ ಕೇಳಿ ಬರುತ್ತಿದೆ. ಯೋಗ ವಿಶ್ವ ವಿದ್ಯಾಲಯ ಪ್ರಾರಂಭಗೊಂಡರೆ ನಗರದಲ್ಲಿ ಯೋಗ ಚಟುವಟಿಕೆಗೆ ಮತ್ತಷ್ಟು ಉತ್ತೇಜನ ನೀಡಿದಂತಾಗುತ್ತದೆ. ವಿಶ್ವ ವಿದ್ಯಾಲಯ ಪ್ರಾರಂಭಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮನಸ್ಸು ಮಾಡಬೇಕಾಗಿದೆ.

ನಗರದಲ್ಲಿ ಯೋಗ ದಿನಾಚರಣೆಯನ್ನು ಪ್ರತಿಬಾರಿ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಅರಮನೆ ಆವರಣದಲ್ಲಿ ಯೋಗ ದಿನಾಚರಣೆ ನಡೆಸಲು ಉದ್ದೇಶಿಸಲಾಗಿದ್ದು, ಒಟ್ಟು 10 ಸಾವಿರ ಯೋಗ ಪಟುಗಳನ್ನು ಸೇರಿಸಲಾಗುವುದು. ಪ್ರತಿ ಬಾರಿ ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಯೋಗ ದಿನಾಚರಣೆ ನಡೆಸಲಾಗುತಿತ್ತು. ಆದರೆ, ಈ ಬಾರಿ ವಿಧಾನಸಭೆ ಚುನಾವಣೆ ಎದುರಾದ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಯೋಗ ಆಯೋಜಿಸಲು ಸಿದ್ಧತೆ ಕೈಗೊಳ್ಳಲು ಸಮಯಾವಕಾಶ ದೊರೆಯಲಿಲ್ಲ. ಹೀಗಾಗಿ ಅರಮನೆ ಆವರಣದಲ್ಲಿ ಯೋಗ ದಿನಾಚರಣೆ ನಡೆಸಲು ಸಿದ್ಧತೆ ಕೈಗೊಳ್ಳಲಾಗುತ್ತಿದ್ದು, ಜೂ.12 ರಂದು ಜಿಲ್ಲಾಧಿಕಾರಿ ಅವರೊಂದಿಗೆ ಸಭೆ ನಡೆಯಲಿದ್ದು, ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.

ಶ್ರೀಹರಿ ದ್ವಾರಕನಾಥ್, ಅಧ್ಯಕ್ಷ, ಮೈಸೂರು ಯೋಗ ಒಕ್ಕೂಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net