

ತಿ.ನರಸೀಪುರ: ಯೋಗವೆಂದರೆ ಆಸನಪ್ರಾಣಾಯಾಮಗಳ ಷ್ಟೇ ಅಲ್ಲ, ಎಂಟು ಅಂಗಗಳಿರುವ ಯೋಗಶಾಸ್ತ್ರವೂ ಅಲ್ಲ, ಅದು ಭಾರತವು ಸಾಕ್ಷಾತ್ಕರಿಸಿಕೊಂಡಿರುವ ಒಂದು ಜೀವನ ದೃಷ್ಟಿಯಾಗಿದೆ ಎಂದು ಮಾಜಿ ಸಚಿವ ಎನ್.ಮಹೇಶ್ ಹೇಳಿದರು.
ಪಟ್ಟಣದ ಪಿಆರ್‌ಎಂ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕಲಾ ಪದ್ಮ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಯೋಗ ವಿಜ್ಞಾನವು ಕೇವಲ ಯಾವುದೋ ಒಂದು ಜಾತಿ, ಧರ್ಮಕ್ಕೆ ಮೀಸಲಾದುದ್ದಲ್ಲ. ಪ್ರಪಂಚದ ಎಲ್ಲ ಧರ್ಮಿಯರು ಯೋಗವನ್ನು ಒಪ್ಪಿಕೊಂಡಿದ್ದಾರೆ ಎಂದರೆ ಇದು ಧಾರ್ಮಿಕ ಆಚರಣೆ ಅಲ್ಲ ಎಂಬುದು ಸ್ಪಷ್ಟವಾಗಿದೆ. ಯೋಗ ವಿಜ್ಞಾನ ಪ್ರಪಂಚದೆಲ್ಲೆಡೆ ವ್ಯಾಪಿಸಿದೆ. ಯೋಗದಿಂದ ಮಾನಸಿಕ ನೆಮ್ಮದಿ, ಸದೃಢ, ಆರೋಗ್ಯವಂತ ದೇಹವನ್ನು ಹೊಂದಬಹುದಾಗಿದೆ ಎಂದರು.
ಇಂದಿನ ವೇಗದ ಜೀವನದಲ್ಲಿ ಜನತೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಆಗುತ್ತಿಲ್ಲ. ಹೀಗಾಗಿ ಒಟ್ಟಾರೆ ಜೀವನಶೈಲಿಯ ಮೇಲೆ ಬಹಳಷ್ಟು ದುಷ್ಪರಿಣಾಮವಾಗಿದೆ. ಹಾಳಾದ ಜೀವನ ಕ್ರಮದಿಂದ ತಾರುಣ್ಯದಲ್ಲೇ ಕೆಲವರಿಗೆ ಮಧುಮೇಹ, ಬೊಜ್ಜು ಆವರಿಸುತ್ತಿವೆ. ಇಂಥ ಒತ್ತಡದ ಜೀವನಶೈಲಿಯಲ್ಲಿ ಫಿಟ್ನೆಸ್ ಕಾಪಾಡಲು, ದೇಹಕ್ಕೆ ಚೈತನ್ಯ ನೀಡಲು ಹಾಗೂ ತನ್ನನ್ನು ತಾನು ಸಾಕ್ಷಾತ್ಕಾರ ಮಾಡಿಕೊಳ್ಳಲು ಯೋಗ ತುಂಬಾನೇ ಸಹಕಾರಿಯಾಗಿದೆ ಎಂದರು.
ಯೋಗವು ಭಾರತದ ಸನಾತನ ಪರಂಪರೆಯ ಅಮೂಲ್ಯ ಕೊಡುಗೆಯಾಗಿದೆ. ಇದು ದೇಹ ಮತ್ತು ಮನಸುಗಳನ್ನು ಬೆಸೆಯುತ್ತದೆ, ವಿಚಾರ ಹಾಗೂ ಆಚಾರಗಳನ್ನು ಬೆಸೆಯುತ್ತದೆ. ಸಹಿಷ್ಣುತೆ ಹಾಗೂ ನೆಮ್ಮದಿಯನ್ನು ಹೆಚ್ಚಿಸುತ್ತದೆ. ಪ್ರಕೃತಿ ಹಾಗೂ ಮಾನವನ ಮಧ್ಯೆ ಮಧುರ ಸಂಬಂಧವನ್ನು ಯೋಗ ಬೆಸೆಯುತ್ತದೆ. ಇದು ಕೇವಲ ಒಂದು ವ್ಯಾಯಾಮವಲ್ಲ. ಮನುಷ್ಯನೊಬ್ಬ ತನ್ನನ್ನು ತಾನು ಸಾಕ್ಷಾತ್ಕರಿಸಿಕೊಳ್ಳುವ ಮಾರ್ಗ ಇದಾಗಿದೆ ಎಂದು ತಿಳಿಸಿದರು.
ಪಿಆರ್‌ಎಂ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕೆ.ಎನ್.ಸೌಮ್ಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೂಗೂರಿನ ದೇಶೇಶ್ವರ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಜಿ.ಎಸ್.ಅಜಯ್ ಶಾಸ್ತ್ರಿ, ವಿಶ್ವಚೇತನ ಸಂಸ್ಕೃತ ಪಾಠಶಾಲೆಯ ಪ್ರಾಂಶುಪಾಲ ಡಾ.ಸಿ.ಎಚ್.ಗುರುರಾಜರಾವ್, ಅಮೃತ ಯೋಗಿ ಅಂತಾರಾಷ್ಟ್ರೀಯ ಯೋಗ ಪ್ರತಿಷ್ಠಾನದ ಅಧ್ಯಕ್ಷ ಅಮೃತ ಯೋಗಿ, ಸಮಾಜ ಸೇವಕ ಕೆ.ಎನ್.ಪ್ರಭುಸ್ವಾಮಿ, ವೀರಶೈವ ಮಹಾಸಭಾದ ಅಧ್ಯಕ್ಷ ಸಿ.ಎಂ.ಪ್ರಕಾಶ್, ಕ್ಷೇತ್ರ ಬಿಜೆಪಿ ಅಧ್ಯಕ್ಷ ಸತ್ಯಪ್ಪ, ನಿರ್ದೇಶಕರಾದ ಪೂಜಿತ್ ಮೆಡಿಕಲ್ ಕುಮಾರ್, ಯುವಿಕ್ ಜೋಶ್ ತಂಡದ ಸಂಚಾಲಕ ವಿ.ಶ್ರೀನಿವಾಸ್, ಕನ್ನಡ ಸಹಾಯಕ ಪ್ರಾಧ್ಯಾಪಕ ಎಂ.ನಾಗರಾಜು, ಉಪನ್ಯಾಸಕರಾದ ಎಸ್.ಸಿದ್ದೇಶ್, ಮಹಾದೇವಸ್ವಾಮಿ,ಹರೀಶ್, ಬಸವಣ್ಣ, ರಾಘವೇಂದ್ರ, ಸೋಮು, ದೈಹಿಕ ಶಿಕ್ಷಕ ಪ್ರಕಾಶ್ ಇದ್ದರು.