

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪ್ರತಿಯೊಬ್ಬರು ಆರೋಗ್ಯವಾಗಿ ಜೀವನ ನಡೆಸಬೇಕು, ಆರೋಗ್ಯಕ್ಕಿಂತ ಭಾಗ್ಯ ಮತ್ತೊಂದಿಲ್ಲ. ಈ ಅರೋಗ್ಯದ ಗುಟ್ಟು ಯೋಗ ಮಾಡುವವರಲ್ಲಿ ಅಡಗಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಹೇಳಿದರು.
ದೇವನಹಳ್ಳಿ ಟೌನ್‌ನಲ್ಲಿರುವ ಕ್ರೀಡಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ಹಾಗೂ ಗ್ರಾಮಾಂತರ ಜಿಲ್ಲಾ ಆಯುಷ್ ಕಚೇರಿ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 10 ನೇ ಜಿಲ್ಲಾಮಟ್ಟದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದರು.ಯೋಗವು ರೋಗವನ್ನು ದೂರ ಮಾಡುವ ಶಕ್ತಿ ಹೊಂದಿದೆ. ಪ್ರತಿಯೊಬ್ಬರು ಜೀವನದ ಒಂದು ಭಾಗವಾಗಿ ಯೋಗ ಅಳವಡಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ಯೋಗಾಸನ ಯೋಗಾಭ್ಯಾಸ ಕೇವಲ ಜೂ.21ರ ಅಂತಾರಾಷ್ಟ್ರೀಯ ಯೋಗದಿನಾಚರಣೆಗೆ ಸೀಮಿತವಾಗಬಾರದು. ಪ್ರತಿ ದಿನ ಯೋಗಭ್ಯಾಸ ಮಾಡುವುದರಿಂದ ಈ ಮಹತ್ವಾಕಾಂಕ್ಷಿ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಎಂದು ಡಿಸಿ ಹೇಳಿದರು. ಪ್ರತಿ ದಿನವೂ ನಮ್ಮೆಲ್ಲರ ಜೀವನದ ಒಂದು ಪ್ರಮುಖ ಭಾಗವಾಗಿ ಯೋಗಾಭ್ಯಾಸ ಅಳವಡಿಸಿಕೊಂಡಾಗ ಯಾವುದೇ ರೋಗವೂ ನಮ್ಮಗಳ ಹತ್ತಿರ ಸುಳಿಯುವುದಿಲ್ಲ, ವಿದ್ಯಾರ್ಥಿಗಳು ಮನಸ್ಸು ಶುದ್ಧವಾಗಿ, ದೇಹ ಸದೃಢವಾಗಿ ಇಟ್ಟುಕೊಳ್ಳಲು ಯೋಗವೂ ಸಹಕಾರಿಯಾಗಲಿದೆ, ಓದಿದ ಪಾಠಗಳು ಮನನವಾಗುತ್ತವೆ, ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಏಕಾಗ್ರತೆಗೆ ಯೋಗ ಬಹಳ ಸಹಕಾರಿಯಾಗಿದೆ ಎಂದು ಹೇಳಿದರು.
ಯೋಗಾಸನ ಪ್ರದರ್ಶನ: ಪತಂಜಲಿ ಯೋಗ ಪಟುಗಳು, ದೇವನಹಳ್ಳಿ ಟೌನ್ ವ್ಯಾಪ್ತಿಯ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ‘ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ಎಂಬ ಈ ಬಾರಿಯ ಘೋಷವಾಕ್ಯದೊಂದಿಗೆ ಸಾಮೂಹಿಕವಾಗಿ ವಿವಿಧ ಯೋಗಾಸನ ಪ್ರದರ್ಶಿಸಿದರು. ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಹಾಗೂ ಜಿಪಂ ಸಿಇಒ ಡಾ.ಕೆ.ಎನ್.ಅನುರಾಧಾ ಯೋಗಪಟುಗಳೊಂದಿಗೆ ಯೋಗ ಪ್ರದರ್ಶಿಸುವ ಮೂಲಕ ಗಮನ ಸೆಳೆದರು. ಕ್ರೀಡೆ ಹಾಗೂ ಯೋಗ ತರಬೇತಿದಾರರಾದ ಭಾಗ್ಯಶ್ರೀ ಹಾಗೂ ಶ್ರೀನಿವಾಸ ಅವರು ಒಂದು ಗಂಟೆ ಕಾಲ ವಿವಿಧ ಯೋಗ ಆಸನಗಳನ್ನು ಹೇಳಿಕೊಟ್ಟರು.