

ಸದೇಶ್ ಕಾರ್ಮಾಡ್ ಮೈಸೂರು
ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಗಿನ್ನೆಸ್ ದಾಖಲೆ ನಿರ್ಮಿಸಿ ಯೋಗ ನಗರಿಯಾಗಿ ರೂಪುಗೊಂಡಿರುವ ಮೈಸೂರಿನಲ್ಲಿ ಪ್ರಸಕ್ತ ವರ್ಷ ಯೋಗ ದಸರಾದ ಸಂಭ್ರಮ ಕಳೆಕಟ್ಟಲಿದೆ. ಈ ಬಾರಿಯ ಯೋಗ ದಸರಾ ಯೋಗದ ಮಹತ್ವ ಸಾರುವ ಜತೆಗೆ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವ ಗುರಿಯನ್ನೂ ಹೊಂದಿದೆ.
ಪ್ರತಿ ಬಾರಿ ಯೋಗ ದಸರಾದಲ್ಲಿ ಜಿಲ್ಲೆಯ ಜನರು ಅದರಲ್ಲೂ ವಿಶೇಷವಾಗಿ ಮೈಸೂರು ನಗರದ ನಿವಾಸಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದರು. ಈ ಬಾರಿ ರಾಜ್ಯದ ಎಲ್ಲ ಜಿಲ್ಲೆಗಳ ಯೋಗಪಟುಗಳು ಭಾಗವಹಿಸಬೇಕು ಎಂಬ ಉದ್ದೇಶದಿಂದ ರಾಜ್ಯಮಟ್ಟದ ಸ್ಪರ್ಧೆ ಆಯೋಜಿಸಲಾಗಿದೆ.
ಯೋಗ ದಸರಾದಲ್ಲಿ ಪಾಲ್ಗೊಳ್ಳಲು ಆಗಮಿಸುವವರು ತಮ್ಮ ಕುಟುಂಬದವರು ಜತೆಗೆ ಆಗಮಿಸುತ್ತಾರೆ. ಈ ರೀತಿ ಆಗಮಿಸುವವರು ಕೇವಲ ಸ್ಪರ್ಧೆಯಲ್ಲಿ ಭಾಗವಹಿಸಿ ಹಿಂತಿರುಗುವುದಿಲ್ಲ, ಬದಲಾಗಿ ನಗರದ ಪ್ರಮುಖ ಪ್ರವಾಸಿ ತಾಣಗಳಿಗೂ ಭೇಟಿ ನೀಡುತ್ತಾರೆ. ಇದ ರಿಂದ ಯೋಗದ ಜತೆಗೆ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೂ ‘ಯೋಗ ದಸರಾ’ ಕೊಡುಗೆ ನೀಡಲಿದೆ. ಈಗಾಗಲೇ ರಾಜ್ಯದ ಎಲ್ಲ ಜಿಲ್ಲೆಗಳ ಯೋಗಪಟುಗಳಿಗೆ ಯೋಗ ದಸರಾದಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಣ ನೀಡಲಾಗಿದೆ.
ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಸಾಕಷ್ಟು ಸಮಸ್ಯೆಗೆ ಸಿಲುಕಿತ್ತು. ಕಳೆದ ಒಂದು ವರ್ಷದಿಂದ ಪ್ರವಾಸೋದ್ಯಮ ಚೇತರಿಕೆ ಕಂಡಿದೆ. ಈ ನಡುವೆ ಬರಗಾಲ ಎದುರಾಗಿರುವುದು ದಸರಾ ಉತ್ಸವದ ಮೇಲೂ ಪರಿಣಾಮ ಬೀರಲು ಪ್ರಾರಂಭವಾಗಿದೆ. ಇಂತಹ ಸಂದರ್ಭದಲ್ಲಿ ದಸರಾ ಉತ್ಸವಕ್ಕೆ ಪ್ರವಾಸಿಗರನ್ನು ಸೆಳೆಯಲು ಯೋಗ ದಸರಾ ಅಳಿಲು ಸೇವೆ ನೀಡಲು ಮುಂದಾಗಿರುವುದು ಶ್ಲಾಘನೀಯ.
ಯೋಗದಲ್ಲಿ ಮೈಸೂರು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ನಗರ. ನಗರದ ರೇಸ್‌ಕೋರ್ಸ್ ಮೈದಾನದಲ್ಲಿ 2017 ಜೂನ್ 21 ರಂದು ಹಮ್ಮಿಕೊಂಡಿದ್ದ ತೃತೀಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಬರೋಬ್ಬರಿ 55,506 ಯೋಗ ಪಟುಗಳು ಪಾಲ್ಗೊಂಡು ಸಾಮೂಹಿಕ ಯೋಗ ಪ್ರದರ್ಶಿಸುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿದ್ದರು. ಈ ಗಿನ್ನೆಸ್ ದಾಖಲೆಯ ಮೂಲಕ ಮೈಸೂರು ಜಾಗತಿಕವಾಗಿ ಗಮನ ಸೆಳೆಯಿತು. ಅಲ್ಲದೆ 2022ರಲ್ಲಿ ಅರಮನೆ ಆವರಣದಲ್ಲಿ ಹಮ್ಮಿಕೊಂಡ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡು ಗಮನ ಸೆಳೆದರು. ಇದರಿಂದ ನಗರದಲ್ಲಿ ಯೋಗ ಕಲಿಯುವವರ ಸಂಖ್ಯೆ ವೃದ್ಧಿಯಾಗಿದೆ. ಅಲ್ಲದೆ, ಯೋಗ ಕಲಿಯಲು ದೇಶ, ವಿದೇಶದಿಂದ ಆಗಮಿಸುವವರ ಸಂಖ್ಯೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ದಸರಾ ಉತ್ಸವದಲ್ಲಿ ಜಾಗತಿಕ ಮಟ್ಟದ ಯೋಗ ಸ್ಪರ್ಧೆ ಆಯೋಜಿಸಲು ಸಹ ಚಿಂತನೆ ನಡೆಸಬಹುದು, ಅಷ್ಟರಮಟ್ಟಿಗೆ ಮೈಸೂರು ಯೋಗಾದಲ್ಲಿ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ.
ಅ.15 ರಂದು ನಗರದ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಯೋಗ ದಸರಾಗೆ ಚಾಲನೆ ದೊರೆಯಲಿದ್ದು, ಇದೇ ಸಂದರ್ಭ ರಾಜ್ಯ ಮಟ್ಟದ ಯೋಗ ನೃತ್ಯರೂಪಕ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧೆಯು ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ನಡೆಯಲಿದೆ. ಅ.16 ರಂದು ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ಆವರಣದಲ್ಲಿ ಬೆಳಗ್ಗೆ 6 ರಿಂದ 8ರವರೆಗೆ ಗ್ರಾಮೀಣ ಯೋಗ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಸಾಮೂಹಿಕ ಯೋಗಾಭ್ಯಾಸ ಮತ್ತು ಶಿವನಮಸ್ಕಾರ ಹಮ್ಮಿಕೊಳ್ಳಲಾಗಿದೆ. ಅ.19 ರಂದು ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ದಸರಾ ವಸ್ತು ಪ್ರದರ್ಶನ ಆವರಣದ ಪಿ. ಕಾಳಿಂಗರಾವ್ ಸಭಾಂಗಣದಲ್ಲಿ ರಾಜ್ಯಮಟ್ಟದ ದಸರಾ ಯೋಗಾಸನ ಸ್ಪರ್ಧೆ ಏರ್ಪಡಿಸಲಾಗಿದೆ. ಅ.20 ರಂದು ಜಿಲ್ಲಾ ಕಾರಾಗೃಹದಲ್ಲಿ ಬೆಳಗ್ಗೆ 6 ರಿಂದ 8ರವರೆಗೆ ಕೈದಿಗಳಿಗೆ ವಿಶಿಷ್ಟ ಯೋಗ, ಅ.22 ರಂದು ಬೆ.6 ರಿಂದ 8ರವರೆಗೆ ಚಾಮುಂಡಿಬೆಟ್ಟದಲ್ಲಿ ಯೋಗ ಚಾರಣ ಹಾಗೂ ಯೋಗದ ಮೂಲಕ ದುರ್ಗಾ ನಮಸ್ಕಾರ ಹಮ್ಮಿಕೊಳ್ಳಲಾಗಿದೆ. ರಾಜ್ಯಮಟ್ಟದ ಯೋಗ ಸ್ಪರ್ಧೆಗೆ ಸಂಬಂಧಿಸಿದ ಮಾಹಿತಿಗೆ ಯೋಗ ಗುರು ಡಾ.ಪಿ.ಎನ್. ಗಣೇಶ್ ಕುಮಾರ್ (ಮೊ:94486 00581) ಸಂಪರ್ಕಿಸಬಹುದು.
ಈ ಬಾರಿಯ ಯೋಗ ದಸರಾಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಯೋಗಪಟುಗಳನ್ನು ಆಹ್ವಾನಿಸಲಾಗಿದೆ. ಯೋಗದ ಮಹತ್ವವನ್ನು ಎಲ್ಲಡೆ ಪಸರಿಸುವುದು ಹಾಗೂ ಯೋಗದ ಮೂಲಕ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವ ಉದ್ದೇಶವನ್ನು ಹೊಂದಿದ್ದೇವೆ. ಈ ಹಿನ್ನೆಲೆಯಲ್ಲಿ ಈ ಬಾರಿ ರಾಜ್ಯಮಟ್ಟದ ಯೋಗ ನೃತ್ಯರೂಪಕ ಸ್ಪರ್ಧೆ ಹಾಗೂ ದಸರಾ ಯೋಗಾಸನ ಸ್ಪರ್ಧೆ ಆಯೋಜಿಸಲಾಗಿದೆ.
ಡಾ.ಪುಷ್ಪಾ, ಕಾರ್ಯದರ್ಶಿ, ಯೋಗ ದಸರಾ ಉಪ ಸಮಿತಿ