ಯೋಗದಿಂದ ಸರ್ವ ರೋಗ ನಿವಾರಣೆ

nrp yoga
ಎನ್.ಆರ್.ಪುರದಲ್ಲಿ ಯೋಗ, ಧ್ಯಾನ, ಪ್ರಾಣಾಯಾಮ ಶಿಬಿರವನ್ನು ಡಿ.ನಾಗರಾಜ್ ಗುರೂಜಿ ಉದ್ಘಾಟಿಸಿದರು. ಎಚ್.ಆರ್.ದಿನೇಶ್, ಎಚ್.ಬಿ.ರಘುವೀರ್, ಎನ್.ಕೆ.ಕಿರಣ್, ಡಿ.ಸಿ.ದಿವಾಕರ್ ಇತರರಿದ್ದರು.
Published on

ಎನ್.ಆರ್.ಪುರ: ಯೋಗದಿಂದ ಸರ್ವರೋಗಗಳೂ ನಿವಾರಣೆಯಾಗುತ್ತವೆ ಎಂದು ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್‌ನ ಡಿ.ನಾಗರಾಜ್ ಗುರೂಜಿ ಹೇಳಿದರು.

ಮಂಗಳವಾರ ಹಿರಿಯ ನಾಗರಿಕರ ಸಮಿತಿ, ವಿವಿಧ ಸಂಘಟನೆಗಳೊಂದಿಗೆ ಯೋಗ, ಧ್ಯಾನ, ಪ್ರಾಣಾಯಾಮ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ದೈಹಿಕ, ಮಾನಸಿಕ ಕಾಯಿಲೆಗಳನ್ನು ಯೋಗದಿಂದ ನಿವಾರಣೆ ಮಾಡಬಹುದು ಎಂದರು.
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಧ್ಯಾನ, ಯೋಗ ಅವಶ್ಯಕ. ಯೋಗದಿಂದ ನರಗಳಿಗೆ ಹೊಸ ಶಕ್ತಿ ಬರುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ, ದೃಷ್ಟಿದೋಷ, ರಕ್ತದೊತ್ತಡ, ಮಧುಮೇಹ ನಿವಾರಣೆಯಾಗುತ್ತದೆ. ಶವಾಸನದಿಂದ ದೇಹ ಹಗುರವಾಗುತ್ತದೆ. ಧ್ಯಾನದಿಂದ ಲವಲವಿಕೆಯಿಂದ ಇರಬಹುದು, ಮಾನಸಿಕ ನೆಮ್ಮದಿ ಸಿಗುತ್ತದೆ. ಹೃದಯದ ಕಾಯಿಲೆಗಳು ದೂರವಾಗುತ್ತವೆ ಎಂದು ಹೇಳಿದರು.
192 ದೇಶಗಳಲ್ಲಿ ಯೋಗ ಪ್ರಸಿದ್ಧಿ ಪಡೆದಿದೆ. ಪ್ರತಿನಿತ್ಯ ನಡಿಗೆ, ಯೋಗ, ಧ್ಯಾನದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಈ ಕುರಿತು 15 ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಹೇಳಿಕೊಡಲಾಗುವುದು ಎಂದು ತಿಳಿಸಿದರು.
ಹಿರಿಯ ನಾಗರಿಕರ ಸಮಿತಿ ಅಧ್ಯಕ್ಷ ಎಚ್.ಆರ್.ದಿನೇಶ್ ಮಾತನಾಡಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಶಿಬಿರ ಸದುಪಯೋಗಪಡಿಸಿಕೊಳ್ಳ ಬೇಕು ಎಂದರು. ರೋಟರಿ ಸಂಸ್ಥೆ ಝೋನಲ್ ಲೆಪ್ಟಿನೆಂಟ್ ಜಿ.ದಿವಾಕರ್ ಮಾತನಾಡಿ, ಆರೋಗ್ಯವೇ ದೊಡ್ಡ ಸಂಪತ್ತು ಎಂದರು.
ಗೆಳೆಯರ ಬಳಗದ ಅಧ್ಯಕ್ಷ ಎಚ್.ಬಿ.ರಘುವೀರ್, ರೋಟರಿ ಅಧ್ಯಕ್ಷ ಎನ್.ಕೆ.ಕಿರಣ್, ಮಾಜಿ ಅಧ್ಯಕ್ಷ ಡಿ.ಸಿ.ದಿವಾಕರ್, ಲಯನ್ಸ್ ಕ್ಲಬ್ ಅಧ್ಯಕ್ಷ ರವಿಚಂದ್ರ, ರೋಟರಿ ಕಾರ್ಯದರ್ಶಿ ವಿದ್ಯಾನಂದಕುಮಾರ್, ಕೆ.ಎಸ್.ರಾಜಕುಮಾರ್, ವಿಜಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net