ದೇಹ, ಮನಸ್ಸಿನ ಆರೋಗ್ಯಕ್ಕೆ ಯೋಗ ಸಹಕಾರಿ: ಸಚಿವ ದಿನೇಶ್ ಗುಂಡೂರಾವ್ ಅಭಿಮತ

92
Published on

ಮೈಸೂರು: ದೇಹ, ಮನಸ್ಸಿನ ಆರೋಗ್ಯಕ್ಕೆ ಯೋಗ ಸಹಕಾರಿಯಾಗಿದ್ದು, ಎಲ್ಲರೂ ಯೋಗ ಮಾಡುವುದು ಉತ್ತಮ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಅಲ್ಯೂಮಿನಿ ಅಸೋಸಿಯೇಷನ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಯೋಗ ದಸರಾ, ಯೋಗ ನೃತ್ಯರೂಪಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯೋಗ ದಸರಾವನ್ನು ವೀಕ್ಷಿಸಲು ನಾನಾ ದೇಶಗಳಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ಹೀಗಾಗಿ ಯೋಗಕ್ಕೆ ಕೇಂದ್ರವಾಗಿರುವ ನಗರ ಮೈಸೂರು ಎಂದು ಸಂತಸ ವ್ಯಕ್ತಪಡಿಸಿದರು.
ಮೈಸೂರು ದಸರಾ ನಮ್ಮ ನಾಡಿನ ಪ್ರತಿಷ್ಠೆ ಮತ್ತು ಹೆಮ್ಮೆಯನ್ನು ಹೆಚ್ಚಿಸುವ ಹಬ್ಬವಾಗಿದ್ದು, ಇಂಥಹ ಹಬ್ಬದಲ್ಲಿ ಯೋಗಾ ದಸರಾ ಕೂಡ ವಿಶ್ವದಲ್ಲೇ ಪ್ರಖ್ಯಾತಿ ಹೊಂದಿದೆ. ನವರಾತ್ರಿಯ 9 ದಿನಗಳಲ್ಲಿ ನಡೆಯುವ ಸಾಂಸ್ಕೃತಿಕ ಕ್ರೀಡೆ, ವಿಭಿನ್ನ ವೈಶಿಷ್ಟೃಕಾರ್ಯಕ್ರಮಗಳ ಜತೆಗೆ ಯೋಗವೂ ಸೇರಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಅನೇಕರು ಯೋಗ ಕಲಿಯಲು, ತಿಳಿದುಕೊಳ್ಳಲು ಹಾಗೂ ಅಭ್ಯಾಸ ಮಾಡುವುದಕ್ಕೆ ವಿಶ್ವದಾದ್ಯಂತ ಮೈಸೂರಿಗೆ ಆಗಮಿಸುತ್ತಾರೆ. ಯೋಗ ನಮ್ಮ ಶರೀರ, ಮನಸ್ಸು ಮತ್ತು ಅಧ್ಯಾತ್ಮಿಕ ಬೆಳವಣಿಗೆಗೆ ಪರಿಣಾಮಕಾರಿಯಾದ ಅಂಶವಾಗಿದ್ದು, ದೇಹ ಮತ್ತು ಮನಸ್ಸನ್ನು ನಿಯಂತ್ರಣ ಮಾಡಲು ಸಹಕಾರಿಯಾಗಿದೆ ಎಂದರು.
ಪಾಶ್ಚಿಮಾತ್ಯ ದೇಶಗಳಲ್ಲಿ ಯೋಗವನ್ನು ಪರಿಚಯಿಸಿದ ಮೊದಲಿಗರೆಂದರೆ ಸ್ವಾಮಿ ವಿವೇಕಾನಂದರು. ಆರೋಗ್ಯ ಇಲಾಖೆ ಯೋಗಕ್ಕೆ ಹೆಚ್ಚಿನ ಗಮನವನ್ನು ನೀಡುತ್ತಾ ಬಂದಿದೆ. ಪ್ರತಿನಿತ್ಯ ಯೋಗಾಸನವನ್ನು ಮಾಡುವ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಬಹುದು. ಒಳ್ಳೆಯ ಆರೋಗ್ಯಕ್ಕಾಗಿ ನಾವು ಶಿಸ್ತಿನ ಜೀವನವನ್ನು ನಡೆಸುವುದರಿಂದ ಯಾವುದೇ ರೀತಿಯ ಅನಾರೋಗ್ಯಕ್ಕೆ ತುತ್ತಾಗುವ ಪರಿಸ್ಥಿತಿ ಇರುವುದಿಲ್ಲ ಎಂದು ಹೇಳಿದರು.
ಕರ್ನಾಟಕ ಸಂಸ್ಕೃತ ವಿದ್ಯಾಲಯದ ಕುಲಪತಿ ಡಾ.ಎಸ್.ಅಹಲ್ಯಾ ಮಾತನಾಡಿ, ಯೋಗವನ್ನು ಮೈಸೂರು ಅರಸರು ಪ್ರೋತ್ಸಾಹಿಸಿ ಬೆಳೆಸಿದರು. ಮುಮ್ಮಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಯೋಗಕ್ಕೆ ಮೈಸೂರು ಪ್ರಸಿದ್ಧಿ ಪಡೆದುಕೊಂಡಿತು ಎಂದರು.
ರಾಜರ ಪ್ರೋತ್ಸಾಹದಿಂದಾಗಿ ಅನೇಕ ಯೋಗ ಗುರುಗಳು ಮೈಸೂರಿನಿಂದ ಹೊರ ಬಂದು, ದೇಶ, ವಿದೇಶದಲ್ಲಿ ಯೋಗ ಕಲಿಸಿದರು. ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲಿ ಯೋಗವನ್ನು ಸೇರಿಸುವ ಮೂಲಕ ಅದಕ್ಕೆ ಒಂದು ಆಯಾಮ ನೀಡಲಾಯಿತು. ಈಗ ಯೋಗ ವಿಶ್ವವ್ಯಾಪಿ ಆವರಿಸುತ್ತಿದೆ ಎಂದು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ, ಯೋಗ ದಸರಾ ಉಪ ಸಮಿತಿಯ ವಿಶೇಷಾಧಿಕಾರಿಯಾದ ರಮ್ಯಾ , ಆಯುಷ್ ಇಲಾಖೆಯ ಉಪ ನಿರ್ದೇಶಕಿ ಡಾ.ಪುಷ್ಪಾ, ಮೈಸೂರು ಯೋಗ ಆಶೋಷಿಯೇಷನ್ ಮುಖ್ಯಸ್ಥರು, ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳು, ಸರ್ಕಾರೇತರ ಸಂಸ್ಥೆಯ ಅಧ್ಯಕ್ಷರು, ಯೋಗ ಒಕ್ಕೂಟದ ಮುಖ್ಯಸ್ಥರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net