ಮೈಸೂರಿನಲ್ಲಿ ಯೋಗ ಸಮ್ಮೇಳನ ಮುಕ್ತಾಯ : ಐದು ನಿರ್ಣಯಗಳು ಅಂಗೀಕಾರ

Yoga Conference ends in Mysore Five resolutions adopted
Published on

ಮೈಸೂರು: ಕರ್ನಾಟಕ ಯೋಗ ಶಿಕ್ಷಕರ ಒಕ್ಕೂಟ ವತಿಯಿಂದ ನಗರದ ಕಲಾಮಂದಿರದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಪ್ರಥಮ ರಾಜ್ಯಮಟ್ಟದ ಯೋಗ ಸಮ್ಮೇಳನ ಭಾನುವಾರ ಮುಕ್ತಾಯಗೊಂಡಿತು. ಸಮ್ಮೇಳನದಲ್ಲಿ ಪ್ರಮುಖ 5 ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಸರ್ಕಾರ ಎಲ್ಲ ಆಸ್ಪತ್ರೆಗಳಲ್ಲೂ ಯೋಗ ಚಿಕಿತ್ಸಾಲಯ ಸ್ಥಾಪಿಸಬೇಕು, ಶಾಲಾ ಶಿಕ್ಷಣದಲ್ಲಿ ಯೋಗ ಶಿಕ್ಷಣ ಪ್ರಾರಂಭಿಸಬೇಕು, ಆಧ್ಯಾತ್ಮಿಕ ವಿಶ್ವವಿದ್ಯಾಲಯ ತೆರೆಯಬೇಕು, ಶಾಲಾ, ಕಾಲೇಜುಗಳಲ್ಲಿ ಪ್ರತ್ಯೇಕ ಯೋಗ ಶಿಕ್ಷಕರನ್ನು ನೇಮಕ ಮಾಡಬೇಕು, ಮೈಸೂರಿನಲ್ಲಿ ಯೋಗಕ್ಕೆ ಭದ್ರಬುನಾದಿ ಹಾಕಿದ ಕೃಷ್ಣಮಚಾರ್ಯ ಹಾಗೂ ಪಟ್ಟಾಭಿ ಜೋಯಿಸ್ ಸ್ಮಾರಕ ಹಾಗೂ ಪ್ರತಿಮೆ ನಿರ್ಮಾಣ ಮಾಡಬೇಕು ಎಂಬ ನಿರ್ಣಯ ಮಂಡಿಸಿ ಅಂಗೀಕರಿಸಲಾಯಿತು.

ಸಮ್ಮೇಳನ ಸಮಿತಿ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ ಮಾತನಾಡಿ, ಎಲ್ಲ ಕಾಯಿಲೆಗಳಿಗೆ ಮನಸ್ಸೇ ಮೂಲ. ಮನಸ್ಸನ್ನು ಹತೋಟಿಗೆ ತಂದರೆ ಕಾಯಿಲೆಗೆ ಗುರಿಯಾಗುವುದನ್ನು ತಪ್ಪಿಸಬಹುದು. ಕಾಯಿಲೆ ಬಂದ ನಂತರ ಯೋಗಾಭ್ಯಾಸ ಪ್ರಾರಂಭಿಸಿದರೆ ರೋಗಿಯಲ್ಲಿ ಆತ್ಮಸ್ಥೈರ್ಯ ಮೂಡುತ್ತದೆ. ಇದರಿಂದ ರೋಗಿ ಸೇವಿಸುವ ಮಾತ್ರೆಯ ಪ್ರಮಾಣ ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಆರ್. ರಘು ಮಾತನಾಡಿ, ಯೋಗ ಬಲ್ಲವನಿಗೆ ರೋಗವಿಲ್ಲ. ಈ ಹಿಂದೆ ಯೋಗವೇ ನಮ್ಮ ಜೀವನವಾಗಿತ್ತು. ಆದರೆ, ಬದಲಾದ ಜೀವನ ಶೈಲಿಯಿಂದ ಜನರಿಗೆ ಹಲವಾರು ಕಾಯಿಲೆ ಗಳು ಕಾಣಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಜನರು ಯೋಗದತ್ತ ಮರಳುವ ಅವಶ್ಯಕತ ಇದೆ ಎಂದು ಹೇಳಿದರು.

ಪ್ರಸ್ತುತ ಉತ್ತಮ ಆಹಾರ ದೊರೆಯುತ್ತಿಲ್ಲ. ಈ ಹಿಂದೆ ಜನರು ಸೇವಿಸುತ್ತಿದ್ದ ಆಹಾರದಲ್ಲೇ ಔಷಧ ಇರುತ್ತಿದ್ದವು. ಹೀಗಾಗಿ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಕಾಯಿಲೆಯಿಂದ ದೂರ ಉಳಿಯಲು ಉತ್ತಮ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ಯೋಗದ ಅವಶ್ಯಕತೆ ಇದೆ. ನಮ್ಮ ಮನಸ್ಸನ್ನು ಉತ್ತಮಗೊಳಿಸಲು ಪ್ರತಿನಿತ್ಯ ಯೋಗಾಭ್ಯಾಸ ಮಾಡಬೇಕು. ಯೋಗವು ಮನುಷ್ಯನನ್ನು ಉತ್ತಮ ವ್ಯಕ್ತಿಯಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಯೋಗವು ಮನುಷ್ಯನ ಮನಸ್ಸನ್ನು ತಿಳಿಸಿಗೊಳಿಸಿ ಆತನಲ್ಲಿರುವ ಕ್ರೌರ್ಯವನ್ನು ದೂರ ಮಾಡುತ್ತದೆ. ಹೀಗಾಗಿ ಎಲ್ಲರು ಯೋಗಾಭ್ಯಾಸ ಮಾಡಿದರೆ ಪ್ರಸ್ತುತ ವಿಶ್ವ ಎದುರಿಸುತ್ತಿರುವ ಯುದ್ಧದ ಭೀತಿಯಿಂದಲೂ ದೂರವಾಗಬಹುದು ಎಂದು ಅಭಿಪ್ರಾಯಪಟ್ಟರು.

ಐವರಿಗೆ ಯೋಗ ರತ್ನಾಕರ ಪ್ರಶಸ್ತಿ ಪ್ರದಾನ

ಸಮ್ಮೇಳನದಲ್ಲಿ ಹಿರಿಯ ಯೋಗಾಚಾರ್ಯರಾದ ಡಾ.ಎ.ಆರ್. ಸೀತಾರಾಂ, ಎ.ಎನ್. ಮೂರ್ತಿ, ಯೋಗ ಮತ್ತು ಆಯುರ್ವೇದ ತಜ್ಞರಾದ ಡಾ.ಶಶಿರೇಖಾ, ಅಂತಾರಾಷ್ಟ್ರೀಯ ಯೋಗ ಶಿಕ್ಷಕರಾದ ಡಾ.ಸಿ. ರಮೇಶ್ ಶೆಟ್ಟಿ, ಎಂ.ಎಸ್. ರಮೇಶ್ ಕುಮಾರ್ ಅವರಿಗೆ ಯೋಗ ರತ್ನಾಕರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಡಾ.ಕೆ.ಎಲ್. ಶಂಕರನಾರಾಯಣ ಜೋಯಿಸ್, ನಗರದ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಕೆ.ಎಸ್. ರಾಧಾಕೃಷ್ಣ ರಾಮರಾವ್, ಸಮಾಜ ಸೇವಕರಾದ ರಘುರಾಂ ವಾಜಪೇಯಿ, ಎನ್. ಶ್ರೀಧರ ದೀಕ್ಷಿತ್, ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ, ರಾಜ್ಯ ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷ ರವಿಶಾಸ್ತ್ರಿ, ಸಮ್ಮೇಳನ ಸಮಿತಿ ಉಪಾಧ್ಯಕ್ಷ ಡಾ.ಪಿ.ಎನ್. ಗಣೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಡಾ.ಬಿ.ಪಿ. ಮೂರ್ತಿ, ಸಂಚಾಲಕ ಆರ್.ಎನ್.ಎ. ಹರ್ಷವರ್ಧನ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net