

ಕಡೂರು: ದೇಹ ಮತ್ತು ಮನಸ್ಸನ್ನು ಸುಸ್ಥಿತಿಯಲ್ಲಿಡಲು ಯೋಗಾಭ್ಯಾಸ ಸಹಕಾರಿ ಎಂದು ಮನೋವೈದ್ಯಕೀಯ ತಜ್ಞ ಡಾ. ಎಂ.ಟಿ.ಸತ್ಯನಾರಾಯಣ ತಿಳಿಸಿದರು.
ಮಚ್ಚೇರಿ ಬಳಿಯ ಬೆಂಕಿ ಲಕ್ಷ್ಮಯ್ಯ ಸಭಾಂಗಣದಲ್ಲಿ ಶನಿವಾರ ರಾಜ್ಯ ಮತ್ತು ಜಿಲ್ಲಾ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಬೆಂಗಳೂರು ಕೃಷಿ ಯೋಗ ಮಂದಿರದ ಸಹಯೋಗದಲ್ಲಿ ಕಡೂರಿನ ಸ್ನೇಹಮಯಿ ವಿವೇಕಾನಂದ ಯೋಗ ಕೇಂದ್ರ ಏರ್ಪಡಿಸಿರುವ ನಾಲ್ಕನೇ ರಾಜ್ಯಮಟ್ಟದ ಯೋಗ ಚಾಂಪಿಯನ್‌ಷಿಪ್ ಉದ್ಘಾಟಿಸಿ ಮಾತನಾಡಿದರು.
ಯೋಗ ವಿದ್ಯೆ ವಿಶ್ವಕ್ಕೆ ಭಾರತ ನೀಡಿದ ಕೊಡುಗೆ. ಯೋಗದ ಮಹತ್ವವನ್ನು ವಿಶ್ವದಲ್ಲೆಡೆ ಗೌರವಿಸಲಾಗುತ್ತಿದೆ. ಇತ್ತೀಚೆಗೆ ಯೋಗಕ್ಕೆ ಕ್ರೀಡೆಯ ಸ್ಥಾನಮಾನ ದೊರಕಿದೆ. ರಾಷ್ಟ್ರೀಯ ಮಟ್ಟದ ಯೋಗಪಟುಗಳನ್ನು ತಯಾರು ಮಾಡುತ್ತಿರುವ ಸ್ನೇಹಮಯಿ ವಿವೇಕಾನಂದ ಯೋಗ ಕೇಂದ್ರದ ಶ್ರಮ ಶ್ಲಾಘನೀಯ ಎಂದರು.
ಜಿಲ್ಲಾ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬೆಂಕಿ ಶೇಖರಪ್ಪ ಮಾತನಾಡಿ, ಕಡೂರಿನಲ್ಲಿ ಯೋಗಾಸಕ್ತರು ಹೆಚ್ಚಿದ್ದಾರೆ. ಅವರಿಗಾಗಿ ಒಂದು ಯೋಗ ಕಾಲೇಜು ಅಗತ್ಯವಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ನಿವೇಶನ ವ್ಯವಸ್ಥೆ ಮಾಡಿದರೆ ಯೋಗ ಶಿಕ್ಷಣ ನೀಡುವ ಸಂಸ್ಥೆ ಆರಂಭಿಸಲು ಚಿಂತನೆ ನಡೆಸಿದ್ದೇವೆ ಎಂದರು.
ಡಿಡಿಪಿಐ ಎ.ಪರಶುರಾಮಪ್ಪ ಮಾತನಾಡಿ, ಯೋಗ ವಿದ್ಯೆಗೆ ಜಾಗತಿಕ ಮನ್ನಣೆ ದೊರೆಯುತ್ತಿದೆ. ರಾಜ್ಯಮಟ್ಟದ ಯೋಗ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಯೋಗಪಟುಗಳಿಗೆ ಉತ್ತೇಜನ ನೀಡುವ ಇಂತಹ ಸ್ಪರ್ಧೆಗಳು ಹೆಚ್ಚೆಚ್ಚು ನಡೆಯಬೇಕು ಎಂದರು.
ಸಾನ್ನಿಧ್ಯವಹಿಸಿದ್ದ ನಂದಿ ಮಠದ ಶ್ರೀ ವೃಷಭೇಂದ್ರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಯೋಗ ವಿದ್ಯೆಯಲ್ಲಿ ಅಧ್ಯಾತ್ಮವೂ ಇದೆ. ಮಠಮಾನ್ಯಗಳೂ ಯೋಗದಲ್ಲಿ ಆಸಕ್ತಿ ತಾಳಿವೆ. ನಮ್ಮ ಮಠದಿಂದ ಯೋಗ ಕೇಂದ್ರ ಸ್ಥಾಪಿಸುವ ಚಿಂತನೆ ನಡೆಸಿದ್ದು ಶೀಘ್ರದಲ್ಲಿ ಅದು ಸಾಕಾರಗೊಳ್ಳಲಿದೆ ಎಂದರು.
ಸ್ನೇಹಮಯಿ ವಿವೇಕಾನಂದ ಯೋಗ ಕೇಂದ್ರದ ಕಾರ್ಯದರ್ಶಿ ನವೀನ್ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಯೋಗ ಕಲಿತ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ಸ್ಥಳೀಯ ಯೋಗಾಸಕ್ತರು ಮತ್ತು ಸಂಘ ಸಂಸ್ಥೆಗಳ ಹೆಚ್ಚಿನ ಸಹಕಾರದೊಂದಿಗೆ ರಾಷ್ಟ್ರ ಮಟ್ಟದ ಯೋಗ ಚಾಂಪಿಯನ್‌ಷಿಪ್ ನಡೆಸುವ ಚಿಂತನೆ ನಮ್ಮದಾಗಿದೆ ಎಂದರು.
ಕೃಷಿಕರಾದ ಟಿ.ಕೆ.ಜಗದೀಶ್, ಗಾಯಕ ಹಿರೇನಲ್ಲೂರು ಶ್ರೀನಿವಾಸ್ ಅವರಿಗೆ ಸ್ನೇಹಮಯಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜೆಸಿಐ ಬ್ಯುಸಿನೆಸ್ ವರ್ಲ್ಡ್ ಅಧ್ಯಕ್ಷ ಸಿ.ಆರ್.ಪ್ರೇಂಕುಮಾರ್, ಬ್ಲೂ ಆರ್ಮಿ ಸಂಘಟನೆ ಅಧ್ಯಕ್ಷ ಡಾ. ಸಮೀನಾ ಚೇತನ್, ಯಶಸ್ವಿನಿ ಯೋಗ ಸಂಸ್ಥೆಯ ದೇವೇಂದ್ರಪ್ಪ, ಎಸ್.ಎಸ್.ಗಿರೀಸ್, ಎ.ಎನ್.ಚಂದ್ರು, ಎ.ಜಿ.ಗಿರೀಶ್, ಭರತ್ ಮತ್ತಿತರರಿದ್ದರು.