

ಹುಬ್ಬಳ್ಳಿ: ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಶನ್ ಆಶ್ರಯದಲ್ಲಿ ಧಾರವಾಡ ಜಿಲ್ಲಾ ಯೋಗಾಸನ ಸ್ಪರ್ಧೆಯನ್ನು ಧಾರವಾಡದ ಆರ್.ಎನ್. ಶೆಟ್ಟಿ ಒಳಾಂಗಣ ಕ್ರೀಡಾಂಗಣದಲ್ಲಿ ಆಗಸ್ಟ್ 4ರಂದು ಬೆಳಗ್ಗೆ 8ಕ್ಕೆ ಆಯೋಜಿಸಲಾಗಿದೆ ಎಂದು ನ್ಯಾಷನಲ್ ಯೋಗಾಸನ ಸ್ಪೋರ್ಟ್ಸ್ ಫೆಡರೇಶನ್ ರಾಷ್ಟ್ರೀಯ (ಯೋಗಾಸನ ಭಾರತ) ನಿರ್ದೇಶಕ ಭವರಲಾಲ್ ಆರ್ಯ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸೋಸಿಯೇಶನ್ ತನ್ನ 5ನೇ ವರ್ಷದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯನ್ನು ಆಗಸ್ಟ್ 17 ಹಾಗೂ 18ರಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮಲ್ಲೇಶ್ವರದ ಪುಟ್ಟಮ್ಮ ಬೆಂಕಿ ಲಕ್ಷಯ್ಯ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗೆ ಜಿಲ್ಲೆಯ ಆಸಕ್ತರನ್ನು ಕಳಿಸಲು ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದರು.
ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. 10-14 ವರ್ಷದವರಿಗಾಗಿ ಸಬ್ ಜೂನಿಯರ್ ವಿಭಾಗ, ಜೂನಿಯರ್ ವಿಭಾಗ (14-18), ಸೀನಿಯರ್ ವಿಭಾಗ (18 ವರ್ಷ ಮೇಲ್ಪಟ್ಟವರು), ಮಾಸ್ಟರ್ಸ್ ವಿಭಾಗ (36-45) ಹಾಗೂ ವೇಟರನಲ್ಸ್ ವಿಭಾಗದಲ್ಲಿ 45-55 ವಯೋಮಾನದವರು ಪಾಲ್ಗೊಳ್ಳಬಹುದು. ಈ ಎಲ್ಲ ಕ್ರೀಡೆಗಳು ಕ್ವಾರ್ಟರ್ ಫೈನಲ್ ರೌಂಡ್ ನಲ್ಲಿ ನಡೆಯಲಿವೆ.
ಜಿಲ್ಲಾ ಮಟ್ಟದಲ್ಲಿ ವಿವಿಧ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಪಡೆದವರನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ. ಸ್ಪರ್ಧೆಗಳಲ್ಲಿ ನಿಖರತೆ ತರಲು ಸಾಫ್ಟವೇರ್ ಆಧಾರಿತ ಮಾಪನ ವ್ಯವಸ್ಥೆ ಜಾರಿಗೆ ತರಲಾಗಿದೆ. ಹಾಗಾಗಿ ಯೋಗಾಸನಗಳನ್ನು ನಿಗದಿ ಮಾಡಿದ ಮಾದರಿಯಲ್ಲಿಯೇ ಮಾಡಿದವರನ್ನು ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಸ್ಪರ್ಧೆಗಳು ಮುಕ್ತವಾಗಿದ್ದು, ಯಾರೇ ಆದರೂ ಭಾಗವಹಿಸಬಹುದು ಎಂದರು.
ಇದೇ ಮೊದಲ ಬಾರಿ ಯೋಗಾಸನ ಸ್ಪರ್ಧೆಗಳನ್ನು ಜಿಲ್ಲೆಯಲ್ಲಿ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಒಲಿಂಪಿಕ್ಸ್ ನಲ್ಲಿಯೂ ಯೋಗ ಸ್ಪರ್ಧೆ ಸೇರ್ಪಡೆಯಾಗುವ ಸೂಚನೆಯನ್ನು ಭಾರತ ಸರ್ಕಾರ ನೀಡಿದೆ. ಹಾಗಾಗಿ ಜಿಲ್ಲೆಯಲ್ಲಿ ಕೋಚಿಂಗ್ ಸೆಂಟರ್ ಆರಂಭಿಸುವ ಆಲೋಚನೆ ಇದೆ ಎಂದರು.
ಜಿಲ್ಲಾ ಮಟ್ಟದಲ್ಲಿ ವಿಜೇತರಿಗೆ ಟ್ರೋಫಿ, ಭಾಗಿಯಾದವರಿಗೆ ಪ್ರಶಂಸಾ ಪತ್ರ, ಸಮಾಧಾನಕರ ಪ್ರಶಸ್ತಿ ನೀಡಲಾಗುತ್ತದೆ. ಜಿಲ್ಲೆಯ ಗ್ರಾಮೀಣ ಹಾಗೂ ನಗರದ ಕ್ರೀಡಾಸಕ್ತರು ಹೆಚ್ಚಿನ ಮಾಹಿತಿಗೆ ಡಾ. ಪ್ರಕಾಶ ಪವಾಡಶೆಟ್ಟಿ ಮೊ. 8050415326 ಸಂಪಕಿರ್ಸಲು ಕೋರಿದರು.
ಅಸೋಸಿಯೇಶನ್ ಖಜಾಂಚಿ ರಮೇಶ ಸುಲಾಖೆ, ಸಂಟನಾ ಕಾರ್ಯದರ್ಶಿ ದೇವೇಂದ್ರ ನಾಯಕ ಗೋಷ್ಠಿಯಲ್ಲಿದ್ದರು.