

ಬೆಂಗಳೂರು : ಯೋಗ ಒಂದು ಉತ್ತಮ ಆರೋಗ್ಯದ ಕೈಪಿಡಿ, ಯೋಗವನ್ನು ಅಳವಡಿಸಿಕೊಂಡರೆ ರೋಗ ಮುಕ್ತರಾಗಿ ಆರೋಗ್ಯಯುತ ಜೀವನವನ್ನು ಕಾಣಬಹುದು ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ.
ಜೂನ್‌ನಲ್ಲಿ ಆಚರಿಸಲಾಗುವ ಅಂತರಾಷ್ಟ್ರೀಯ ಯೋಗ ದಿನದ ಹಿನ್ನೆಲೆ ಲೈಫ್ ಎಟರ್ನಲ್ ಟ್ರಸ್ಟ್ ಸಾರ್ವಜನಿಕರಲ್ಲಿ ಯೋಗ ಕುರಿತು ಜಾಗೃತಿ ಮೂಡಿಸಲು ಹಾಗೂ ಧ್ಯಾನದ ಮಹತ್ವ ತಿಳಿಸಿ ಕೊಡಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಂಚರಿಸಲು ರೂಪಿಸಿರುವ ಸಂಚಾರಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಯೋಗ ಎನ್ನುವುದು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಪ್ರಕ್ರಿಯೆ. ಔಷಧ ಅಲ್ಲದ ಔಷಧಿಯ ಗುಂಪಿನ ಪಟ್ಟಿಯಲ್ಲಿ ಯೋಗ ಮತ್ತು ಧ್ಯಾನ ಸೇರುತ್ತದೆ. ಈ ಆಧುನಿಕ ಕಾಲಘಟ್ಟದಲ್ಲಿ ನಾವು ಯಂತ್ರಗಳಂತೆ ಕಾರ್ಯನಿರ್ವಹಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಯೋಗ ಮತ್ತು ಧ್ಯಾನ ಮಾಡುವ ಮೂಲಕ ನಮ್ಮ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಬಹುದು. ಮನಸ್ಸು, ಮೆದುಳು ಹಾಗೂ ದೇಹವನ್ನು ಒಗ್ಗೂಡಿಸುವ ಗಂಗೋತ್ರಿಯೇ ಯೋಗ. ಲೈಫ್ ಎಟರ್ನಲ್ ಟ್ರಸ್ಟ್ ಆಯೋಜನೆಯಲ್ಲಿ ಮಾತಾಜಿ ನಿರ್ಮಲಾದೇವಿ ಸಹಜ ಯೋಗ ಸಂಸ್ಥೆಯ ಸದಸ್ಯರು ಇಂದು ಯೋಗದ ಕುರಿತು ಜನಜಾಗೃತಿ ಮೂಡಿಸುತ್ತಿರುವುದಕ್ಕೆ ಡಾ.ಮಂಜುನಾಥ ಶ್ಲಾಘನೆ ವ್ಯಕ್ತಪಡಿಸಿದರು.
ಇಂದು ಜೀವನಶೈಲಿ ಆಧಾರಿತ ಕಾಯಿಲೆಗಳಿಂದ ಭಾರತದಲ್ಲಿ ಶೇ.60ರಷ್ಟು ಜನ ಸಾವನ್ನಪ್ಪುತ್ತಿದ್ದಾರೆ. ಯೋಗದಿಂದ ಏಕಾಗ್ರತೆ ಸಿಗಲಿದೆ. ಹೃದಯದ ಬಡಿತ ಹಿಡಿತಕ್ಕೆ ಬರಲಿದೆ. ಹೃದಯದ ಬಡಿತ ನಿಯಂತ್ರಣದಲ್ಲಿದ್ದಷ್ಟು ಹೆಚ್ಚು ಕಾಲ ಬದುಕಬಹುದು. ಹಾಗಾಗಿ ಯೋಗವನ್ನು ನಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಡಾ.ಮಂಜುನಾಥ ಸಲಹೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಹಜ ಯೋಗ ಸಂಸ್ಥೆಯ ಸದಸ್ಯ ಗುರುಮೂರ್ತಿ, ಲೈಫ್ ಎಟರ್ನಲ್ ಟ್ರಸ್ಟ್‌ನ ಅಧ್ಯಕ್ಷ ಡಾ. ಮನೋಜ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.