

ಹುಬ್ಬಳ್ಳಿ: ಮಕ್ಕಳು ತಮ್ಮ ದೇಹಸಿರಿಯನ್ನು ರಕ್ಷಿಸಿಕೊಳ್ಳಲು ನಿಯಮಿತವಾಗಿ ವ್ಯಾಯಾಮ, ಧ್ಯಾನ, ಪ್ರಾಣಾಯಾಮಗಳನ್ನು ರೂಢಿಸಿಕೊಳ್ಳುವುದು ತುಂಬಾ ಅವಶ್ಯ ಎಂದು ಶಿಕ್ಷಕಿ ಇಂದಿರಾ ಕುಂದಗೋಳ ಹೇಳಿದರು.
ಇಲ್ಲಿಯ ಭೈರಿದೇವರಕೊಪ್ಪ ಸದಾಶಿವಾನಂದನಗರದ ಗುರುಬಸವ ಯೋಗ, ಪ್ರಾಣಾಯಾಮ ಧ್ಯಾನ ಕೇಂದ್ರದಲ್ಲಿ ರಾಮಾಪುರ ಫೌಂಡೇಷನ್ ವತಿಯಿಂದ ಏರ್ಪಡಿಸಿದ್ದ 60 ದಿನಗಳ ಯೋಗ ಶಿಬಿರದ ಸಮಾರೋಪದಲ್ಲಿ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳ ಆಹಾರ ಪದ್ಧತಿ ಸರಿಯಾಗಿಲ್ಲದಿರುವುದು, ಟಿವಿ, ಮೊಬೈಲ್ ಆಟಗಳಲ್ಲಿ ಹೆಚ್ಚು ಉತ್ಸುಕರಾಗಿರುವುದು, ಮಕ್ಕಳ ಮನಸ್ಸಿನ ಮೇಲೆ ಒತ್ತಡ ಉಂಟಾಗುತ್ತಿದೆ. ಯೋಗ ಮಕ್ಕಳ ಮನಸ್ಸಿನ ಒತ್ತಡವನ್ನು ನಿವಾರಿಸಬಲ್ಲದು. ದೇಹ ನವಚೈತನ್ಯ ಪಡೆಯುತ್ತದೆ ಎಂದರು.
ಫೌಂಡೇಷನ್ ಸನ್ಮಾನ ಸ್ವೀಕರಿಸಿ ಮಾತನಾಡಿದ ಯೋಗ ಶಿಕ್ಷಕ ಕಾಶೀನಾಥ ಹಡಗಲಿ, ಯೋಗ ಮನಸ್ಸನ್ನು ಹೆಚ್ಚು ಕ್ರಿಯಾಶೀಲವಾಗಿಡುತ್ತದೆ. ಉನ್ನತ ಮನಃಶಕ್ತಿ, ನೇರ, ದಿಟ್ಟ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಹಕಾರಿ. ದೀರ್ಘಕಾಲದ ಅಭ್ಯಾಸದಿಂದ ಆಯುಷ್ಯನ್ನು ಹೆಚ್ಚಿಸುವುದಲ್ಲದೇ ಗ್ರಹಿಕೆಯ ಶಕ್ತಿಯನ್ನು ವೃದ್ಧಿಸುತ್ತದೆ ಎಂದರು.
ಶಿಕ್ಷಕ ಸಾಹಿತಿ ಡಾ. ಲಿಂಗರಾಜ ರಾಮಾಪುರ ಸ್ವಾಗತಿಸಿದರು. ಸಂಜನಾ ಹಡಗಲಿ ಕಾರ್ಯಕ್ರಮ ನಿರ್ವಹಿಸಿದರು. ನವ್ಯಾ ರಾಮಾಪುರ ಪ್ರಾಥಿರ್ಸಿದರು. ನೇಹಾ ವಂದಿಸಿದರು.