

ಮಡಿಕೇರಿ:
ಯೋಗ, ಪ್ರಾಣಾಯಾಮ ಮಾಡುವದರಿಂದ ಏಕಾಗ್ರತೆಯೊಂದಿಗೆ ಮನಸು ಸದೃಢವಾಗುತ್ತದೆ ಎಂದು ಪತಜಲಿ ಯೋಗ ಶಿಕ್ಷಣ ಸಂಸ್ಥೆಯ ಯೋಗ ಶಿಕ್ಷಕ ಕೆ.ಕೆ.ಮಹೇಶ್‌ಕುಮಾರ್ ಹೇಳಿದರು.
ವಾಂಡರ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ.ಶಂಕರ್ ಸ್ವಾಮಿ ಸ್ಮರಣಾರ್ಥ ಇಲ್ಲಿನ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉಚಿತ ಕ್ರೀಡಾ ಶಿಬಿರದಲ್ಲಿ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಯೋಗ ಸಹಕಾರಿಯಾಗಲಿದೆ. ಪ್ರಾಣಾಯಾಮದ ಮೂಲಕ ದೇಹದ ತಾಪಮಾನವನ್ನು ಸಮತೋಲನದಲ್ಲಿಟ್ಟುಕೊಳ್ಳಬಹುದು. ದೀರ್ಘ ಉಸಿರಾಟದಿಂದ ಕಾಯಿಲೆಗಳನ್ನು ತಡೆಗಟ್ಟುವದರೊಂದಿಗೆ ಆಯಸ್ಸನ್ನು ವೃದ್ಧಿಸಿಕೊಳ್ಳಬಹುದೆಂದು ತಿಳಿಹೇಳಿದರು. ಕೆಲವೊಂದು ಪ್ರಾಣಾಯಾಮಗಳನ್ನು ಮಕ್ಕಳಿಗೆ ಹೇಳಿಕೊಟ್ಟರು.
ಶಿಬಿರದ ಸಂಚಾಲಕ ಬಾಬು ಸೋಮಯ್ಯ, ತರಬೇತುದಾರರಾದ ಎಸ್.ಟಿ.ವೆಂಕಟೇಶ್, ಶಾಂ ಪೂಣಚ್ಚ, ಗಣೇಶ್, ಜಯಸೂರ್ಯ, ಸಂತೋಷ್, ಪೋಷಕರು ಇದ್ದರು.