

ನೆಲಮಂಗಲ: ದೇಶದ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಬಳಿಕ ಸ್ವಗ್ರಾಮಕ್ಕೆ ಬಂದ ಮಾಜಿ ಸೈನಿಕ ಎಂ.ಎ.ವೆಂಕಟೇಶ್ ಅವರನ್ನು ಗ್ರಾಮದ ಜನ ಸಂಭ್ರಮದಿಂದ ಸೋಮವಾರ ಬರಮಾಡಿಕೊಂಡರು.
ಬೆಂಗಳೂರು ಉತ್ತರ ತಾಲೂಕು ಮಾರಪ್ಪನಪಾಳ್ಯದ ನಿವಾಸಿ ಆಣಪ್ಪ, ಪುಟ್ಟಚೌಡಮ್ಮ ದಂಪತಿ 6ನೇ ಮಗ ಎಂ.ಎ.ವೆಂಕಟೇಶ್ ಡಿ.31ರಂದು ನಿವೃತ್ತಿಯಾಗಿದ್ದರು. ನಿವೃತ್ತಿ ನಂತರ ಹುಟ್ಟೂರಿಗೆ ಆಗಮಿಸಿದ್ದು, ಗ್ರಾಮಸ್ಥರು, ಮಾಜಿ ಸೈನಿಕನ ಜತೆ ವಿದ್ಯಾಭ್ಯಾಸ ಮಾಡಿದ್ದ ಅಕ್ಕಪಕ್ಕ ಗ್ರಾಮದಲ್ಲಿನ ಸ್ನೇಹಿತರು, ಕುಟುಂಬ ವರ್ಗದವರು ಅದ್ದೂರಿಯಾಗಿ ಸ್ವಾಗತಿಸಿದಲ್ಲದೇ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗೌರವಿಸಿದರು.
ಬೈಕ್ ರ‌್ಯಾಲಿ, ಪೂರ್ಣಕುಂಭ ಸ್ವಾಗತ: ಮಾಜಿ ಯೋಧ ಗ್ರಾಮಕ್ಕೆ ಆಗಮಿಸುತ್ತಿರುವ ವಿಚಾರ ತಿಳಿದ ಗ್ರಾಮದ ಯುವಕರು ಗ್ರಾಮದ ಮುಖ್ಯರಸ್ತೆಯಲ್ಲಿ ಕಾದುಕುಳಿತು ಬೈಕ್ ರ‌್ಯಾಲಿ ಮೂಲಕ ಮೆರವಣಿಗೆ ನಡೆಸಿ ಮನೆಗೆ ಕರೆದೊಯ್ದರೇ, ಗ್ರಾಮದ ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದರು. ದಾಸನಪುರ ಗ್ರಾಪಂ ಉಪಾಧ್ಯಕ್ಷೆ ನಾಗವೇಣಿ, ಸದಸ್ಯರಾದ ಪ್ರದೀಪ್, ದೇವರಾಜು, ಗ್ರಾಮದ ಮುಖಂಡರಾದ ಸತೀಶ್, ಜೆ.ಪ್ರದೀಪ್, ಗೋವಿಂದ್‌ರಾಜ್, ಕುಮಾರ್, ಈರಪ್ಪ, ಬ್ಲೂ ಮೂನ್ ಪಬ್ಲಿಕ್ ಶಾಲೆ ಕಾರ್ಯದರ್ಶಿ ಚಂದ್ರಶೇಖರ್ ಇತರರಿದ್ದರು.
ದೇಶದ ಸೈನ್ಯದಲ್ಲಿ ಸೇವೆ ಮಾಡುವುದು ಸುಲಭವಲ್ಲ. ಅದರಲ್ಲೂ ದೇಶದ ಗಡಿ ಭದ್ರತಾ ಪಡೆಯಲ್ಲಿದ್ದಕೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಮರಳಿ ಬಂದಿರುವುದು ಹೆಮ್ಮೆಯ ಸಂಗತಿ. ಇಡೀ ಗ್ರಾಮದ ಜನತೆ ಸಡಗರದಿಂದ ಬರಮಾಡಿಕೊಂಡಿರುವುದು ವಿಭಿನ್ನ ಹಾಗೂ ಸೈನಿಕರಿಗೆ ಪ್ರೇರಣಾದಾಯಕ. ಮಿಲ್ಟ್ರೀಮೂರ್ತಿ, ಬಿಎಂಟಿಸಿ ಮಾಜಿ ನಿರ್ದೇಶಕ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದು, 1999ರಲ್ಲಿ ಎಸ್ಸೆಸ್ಸೆಲ್ಸಿ ಶಿಕ್ಷಣ ಮುಗಿಸಿ ಸೈನ್ಯಕ್ಕೆ ಸೇರಿ 20 ವರ್ಷ ಸೇವೆ ಮಾಡಿದ್ದೇನೆ. ದೇಶದ ವಿವಿಧ ಪ್ರದೇಶಗಳಲ್ಲಿನ ಹವಮಾನ ವೈಪರಿತ್ಯದ ನಡುವೆ ಕಾರ್ಯನಿರ್ವಹಿಸುವಾಗ ಸಾಕಷ್ಟು ಸಂಕಷ್ಟ ಎದುರಿಸುತ್ತೇವೆ. ಗ್ರಾಮದ ಜನತೆ ವಿಶೇಷವಾಗಿ ಊರಿಗೆ ಬರಮಾಡಿಕೊಂಡಿರುವುದು ಸಂತಸ ತಂದಿದೆ. ಯುವಜನತೆ ಉನ್ನತ ಶಿಕ್ಷಣ ಪಡೆದು ಕೇವಲ ಸೈನಿಕರಾಗದೇ ಸೈನ್ಯದಲ್ಲಿ ಉನ್ನತ ಹುದ್ದೆ ಅಲಂಕರಿಸಬೇಕು. ಎಂ.ಎ.ವೆಂಕಟೇಶ್ ನಿವೃತ್ತ ಯೋಧ