ಬಸವನಾಳದಲ್ಲಿ ಯೋಧ ಮಂಜುನಾಥ ಅಂತ್ಯಕ್ರಿಯೆ

Yoddha Manjunath funeral at Basavanala
ಯೋಧ ಮಂಜುನಾಥ ಬೈಲಕೂರ ಕುಟುಂಬಕ್ಕೆ ರಾಷ್ಟ್ರಧ್ವಜ ಹಸ್ತಾಂತರಿಸಿದ ಸೈನಿಕರು.
Published on

ಕಮತಗಿ: ಹುನಗುಂದ ತಾಲೂಕಿನ ಬಸವನಾಳದ ಯೋಧ ಮಂಜುನಾಥ ಶರಣಪ್ಪ ಬೈಲಕೂರ ಅಂತ್ಯಕ್ರಿಯೆ ಮಂಗಳವಾರ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.

ಅಂತ್ಯಕಿರಯೆಗೂ ಮುನ್ನ ಬಾಗಲಕೋಟೆ ಡಿಆರ್ ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಿದರು.

ರಾಜಸ್ಥಾನದ ಬಿಕನೇರಿಯಲ್ಲಿ ಸೇವೆಯಲ್ಲಿದ್ದಾಗ ಭಾನುವಾರ ಹೃದಯಾಘಾತದಿಂದ ಮೃತಪಟ್ಟ ಮಂಜುನಾಥ ಪಾರ್ಥಿವ ಶರೀರ ಮಂಗಳವಾರ ಬೆಳಗ್ಗೆ 9 ಗಂಟೆಗೆ ಬಸವನಾಳಕ್ಕೆ ಆಗಮಿಸಿತು. ಅವರ ನಿವಾಸದ ಬಳಿ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಲಾಯಿತು. ಗ್ರಾಮ ಸೇರಿ ಸುತ್ತಲಿನ ಗ್ರಾಮಗಳ ನೂರಾರು ಗ್ರಾಮಸ್ಥರು, ವಿದ್ಯಾರ್ಥಿಗಳು, ನಿವೃತ್ತ ಸೈನಿಕರು ಆಗಮಿಸಿ ಯೋಧನಿಗೆ ನಮನ ಸಲ್ಲಿಸಿ ಮಂಜುನಾಥ ಅಮರ ರಹೇ’, ಭಾರತ ಮಾತಾ ಕೀ ಜೈ ಘೋಷಣೆ ಕೂಗಿದರು. ಗ್ರಾಮದ ಸರ್ಕಾರಿ ಶಾಲಾ ಆವರಣದ ತಡೆಗೋಡೆ ಬಳಿಯ ಸರ್ಕಾರಿ ಜಾಗದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಮೆರವಣಿಗೆ: ಬೇವೂರ ಗ್ರಾಮದಿಂದ ತೆರೆದ ವಾಹನದಲ್ಲಿ ಯೋಧ ಮಂಜುನಾಥನ ಪ್ರಾರ್ಥಿವ ಶರೀರ ಮೆರವಣಿಗೆ ಆರಂಭಗೊಂಡಿತು.

ಮದಲ್ಲಿರುವ ಭಾರತೀಯ ಸೇನೆ 8ನೇ ಮುಖ್ಯಸ್ಥ ಜನರಲ್ ಜಿ.ಜಿ. ಬೇವೂರ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ಚೌಡಾಪುರ, ಅಂಬ್ಲಿಕೊಪ್ಪಕ್ಕೆ ಮೆರವಣಿಗೆ ಆಗಮಿಸಿತು. ಬಳಿಕ ಮುಗನೂರದಿಂದ ಮರಡಿ ಬೂದಿಹಾಳ, ಬಸವನಾಳದವರೆಗೆ ಮೆರವಣಿಗೆ ನಡೆಯಿತು. ಮೂರೂ ಗ್ರಾಮಗಳ ಮಹಿಳೆಯರು ಮೃತ ಯೋಧನಿಗೆ ಕಳಸದಾರುತಿ ಮಾಡಿ ಗೌರವ ಸಲ್ಲಿಸಿದರು. ನೂರಾರು ಸಂಖ್ಯೆಯಲ್ಲಿ ಯುವಕರು ಬೈಕ್ ರ‌್ಯಾಲಿ ನಡೆಸಿದರು.

ಅಂತ್ಯಕ್ರಿಯೆಯಲ್ಲಿ ಕಮತಗಿ ಹುಚ್ಚೇಶ್ವರ ಸ್ವಾಮೀಜಿ, ಗುಳೇದಗುಡ್ಡ ಒಪ್ಪತ್ತೇಶ್ವರ ಸ್ವಾಮೀಜಿ, ಕೊಲ್ಹಾರದ ಕಲ್ಲಿನಾಥ ಸ್ವಾಮೀಜಿ, ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಶಾಸಕ ವೀರಣ್ಣ ಚರಂತಿಮಠ, ಜಿಪಂ ಮಾಜಿ ಅಧ್ಯಕ್ಷೆ ಗಂಗೂಬಾಯಿ ಮೇಟಿ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ, ಮುಖಂಡರಾದ ಉಮೇಶ ಮೇಟಿ, ಸಂಗಣ್ಣ ಹಂಡಿ, ಬಸವರಾಜ ಅಂಟರತಾನಿ, ಉಪವಿಭಾಗಾಧಿಕಾರಿ ಜಗಲಾಸರ್, ತಹಸೀಲ್ದಾರ್ ನಿಂಗಪ್ಪ ಬಿರಾದಾರ, ಅಮೀನಗಡ ಪಿಎಸ್‌ಐ ಜ್ಯೋತಿ ವಾಲಿಕಾರ, ಕ್ರೈಂ ವಿಭಾಗದ ಪಿಎಸ್‌ಐ ಪಠಾಣ, ಮುಗನೂರ ಗ್ರಾಪಂ ಅಧ್ಯಕ್ಷೆ ಮಲ್ಲವ್ವ ಕೂಗನ್ನವರ, ಪಿಡಿಒ ಪಿ.ಬಿ. ಮುಳ್ಳೂರ, ಪಿಕೆಪಿಎಸ್ ಅಧ್ಯಕ್ಷ ಸಂಗಮೇಶ ಹಾವಳಗಿ, ಗ್ರಾಪಂ ಸದಸ್ಯರು, ಪಿಕೆಪಿಎಸ್ ಸದಸ್ಯರು, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಸ್ಥಳೀಯ ಶಿಕ್ಷಕರು, ಗ್ರಾಮಸ್ಥರು ಭಾಗವಹಿಸಿದ್ದರು.

ಕುಟುಂಬಸ್ಥರ ಆಕ್ರಂದನ

ಯೋಧ ಮಂಜುನಾಥ ಬೈಲಕೂರ ಮೃತಪಟ್ಟ ಸುದ್ದಿ ತಿಳಿದು ಮೂರು ದಿನಗಳಿಂದ ಕುಟುಂಬ ಕಣ್ಣೀರಿನಲ್ಲಿ ಮುಳುಗಿತ್ತು. ಮಂಗಳವಾರ ಯೋಧನ ಪಾರ್ಥಿವ ಶರೀರ ಮನೆಗೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಬಂಧು, ಬಳಗದವರು, ಗ್ರಾಮಸ್ಥರು ಸೇರಿ ಅಪಾರ ಜನಸ್ತೋಮ ದುಃಖದ ಮಡುವಿನಲ್ಲಿತ್ತು.

ಸೈನಿಕ ಮಂಜುನಾಥ ಬೈಲಕೂರ ಅವರು ಚಿಕ್ಕ ವಯಸ್ಸಿನಲ್ಲೇ ಅಕಾಲಿಕವಾಗಿ ನಮ್ಮನ್ನು ಅಗಲಿದ್ದು ನೋವಿನ ವಿಷಯ. ಯೋಧನ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ. ಯೋಧನ ಕುಟುಂಬದೊಂದಿಗೆ ನಾವು ಯಾವಾಗಲೂ ಇರುತ್ತೇವೆ.
ಪಿ.ಸಿ. ಗದ್ದಿಗೌಡರ ಲೋಕಸಭೆ ಸದಸ್ಯ, ಬಾಗಲಕೋಟೆ

ಭಾರತೀಯ ಸೇನೆಯ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ ನಮ್ಮನ್ನು ಅಗಲಿರುವುದು ವಿಷಾದದ ಸಂಗತಿಯಾಗಿದೆ. ದೇವರು ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ. ದೇಶ ರಕ್ಷಣೆಗೆ ಪ್ರಾಣ ಮುಡುಪಾಗಿಟ್ಟಿದ್ದ ಮಂಜುನಾಥ ನಮ್ಮೊಂದಿಗೆ ಇದ್ದಾರೆ.
ವೀರಣ್ಣ ಚರಂತಿಮಠ, ಮಾಜಿ ಶಾಸಕ, ಬಾಗಲಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net