

ಯಳಂದೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹತ್ತಾರು ವೈಯುಕ್ತಿಕ ಹಾಗೂ ಸಾಮೂಹಿಕ ಕಾಮಗಾರಿಗಳನ್ನು ಮಾಡಿಕೊಳ್ಳಲು ಅವಕಾಶವಿದ್ದು, ಸಾರ್ವಜನಿಕರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೊನ್ನೂರು ಗ್ರಾಪಂ ಪಿಡಿಒ ನಿರಂಜನ್ ಸಲಹೆ ನೀಡಿದರು.
ಹೊನ್ನೂರು ಗ್ರಾಪಂ ಕಚೇರಿ ಎದುರು ಬುಧವಾರ ಹಮ್ಮಿಕೊಂಡಿದ್ದ ನರೇಗಾ ಸಾಮಾಜಿಕ ಲೆಕ್ಕ ತಪಾಸಣಾ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿದರು. ವೈಯುಕ್ತಿಕ ಕಾಮಗಾರಿಗಳ ಮೂಲಕ ಕೃಷಿ ಚಟುವಟಿಕೆಗೆ ಅನುಕೂಲವಾಗುವ ಬದು ನಿರ್ಮಾಣ, ಕಾಲುವೆ ಅಭಿವೃದ್ಧಿ, ಕೃಷಿಹೊಂಡ ಹೈನುಗಾರರು ಕೊಟ್ಟಿಗೆ ನಿರ್ಮಾಣ, ಕುರಿ, ಕೋಳಿ, ಹಂದಿ ಸಾಕಣೆ ಘಟಕ, ಅಂತರ್ಜಲ ಅಭಿವೃದ್ಧಿಯಂತಹ ಅನೇಕ ಕಾಮಗಾರಿಗಳಿವೆ. ಹಲವರು ಇದರ ಲಾಭ ಪಡೆದುಕೊಂಡಿದ್ದಾರೆ, ಎಲ್ಲರೂ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.