

ಕೃಷ್ಣಮೂರ್ತಿ ಪಿ.ಎಚ್ ಮಾಯಕೊಂಡ
ದಾವಣಗೆರೆ ತಾಲೂಕಿನ ಮಾಯಕೊಂಡ, ಆನಗೋಡು, ಅಣಜಿ ಹೋಬಳಿಗಳ ಸಾವಿರಾರು ಎಕರೆಯಲ್ಲಿ ಮುಂಗಾರು ಹಂಗಾಮಿನ ಮೆಕ್ಕೆಜೋಳ ಬಿತ್ತನೆಗೆ ರೈತರು ಭೂಮಿಯನ್ನು ಹದಗೊಳಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಬಿತ್ತನೆಗೆ ಸಜ್ಜಾಗಿರುವ ಜಮೀನುಗಳಲ್ಲಿ ಮುಳ್ಳು ಸಜ್ಜೆ ಎಂಬ ಮಹಾಮಾರಿ ಕಳೆ ಮಡಿ ಚೆಲ್ಲಿದಂತೆ ಬೆಳೆಯುತ್ತಿದೆ ಇದನ್ನು ಕಂಡು ರೈತ ಸಮೂಹ ಕಂಗಾಲಾಗಿದೆ.
ಮೆಕ್ಕೆಜೋಳ ಬೆಳೆಯುವ ಖುಷ್ಕಿ (ಬೆದ್ದಲು) ಜಮೀನಿನಲ್ಲಿ ಹುಟ್ಟುವ ಮುಳ್ಳುಸಜ್ಜೆ ಮುಂಗಾರು ಬಿತ್ತನೆಗೆ ಅಡ್ಡಿಯಾಗಿ ನೆಮ್ಮದಿಯನ್ನು ಹಾಳುಮಾಡುತ್ತಿದೆ.
ಒಂದು ವಾರದಿಂದ ನಿರಂತರವಾಗಿ ತಾಲೂಕಿನಾದ್ಯಂತ ಸಾಧಾರಣ ಮಳೆಯಾಗುತ್ತಿರುವುದರಿಂದ ಬಿತ್ತನೆಗೆ ಹದಗೊಳಿಸಿದ ಭೂಮಿಯಲ್ಲಿ ಭಾರಿ ಪ್ರಮಾಣದಲ್ಲಿ, ಪದೇ ಪದೆ ಉಳುಮೆ ಮಾಡುತ್ತಿದ್ದರೂ ಕಳೆ ಹುಟ್ಟುತ್ತಲೇ ಇದೆ. ಮೆಕ್ಕೆಜೋಳ ಸಸಿಯನ್ನೇ ಹೋಲುವ ಮುಳ್ಳುಸಜ್ಜೆ ಬುಡದಿಂದ ತುದಿಯವರೆಗೆ ಬಿಳಿ ಮುಳ್ಳುಗಳನ್ನು ತುಂಬಿಕೊಂಡಿದೆ. ಇದು ದೊಡ್ಡದಾಗಿ ಬೆಳೆದರೆ ನಾಶ ಮಾಡುವುದು ಕಷ್ಟ ಎನ್ನುತ್ತಾರೆ ರೈತರು.
ಬಿತ್ತನೆಯ ನಂತರ ಎಡೆ ಕುಂಟೆ ಹೊಡೆಯಲು ಎತ್ತುಗಳ ಸಂಖ್ಯೆ ವಿರಳವಾಗಿರುವುದರಿಂದ ಕಳೆ ನಾಶ ಮಾಡುವುದು ಕಷ್ಟದ ಕೆಲಸವಾಗಿದೆ. ಅದರಲ್ಲೂ ಮುಳ್ಳುಸಜ್ಜೆ ಯಾವುದೇ ಕಳೆನಾಶಕ ಸಿಂಪಡಿಸಿದರೂ ಸಾಯುವುದಿಲ್ಲ. ಮೆಕ್ಕೆಜೋಳದ ಎತ್ತರಕ್ಕೆ ಬೆಳೆದು ನಿಲ್ಲುತ್ತದೆ. ಇದರಿಂದ ಇಳುವರಿ ಸಾಕಷ್ಟು ಕಡಿಮೆಯಾಗುವುದಲ್ಲದೆ ಕಟಾವು ಮಾಡುವ ಸಮಯಕ್ಕೆ ಮುಳ್ಳುಸಜ್ಜೆ ಒಣಗುತ್ತದೆ. ಇದನ್ನು ಮುರಿದು ರಾಶಿ ಮಾಡುವುದು ಕೂಲಿ ಕಾರ್ವಿುಕರಿಗೆ ಸುಲಭದ ಮಾತಾಗಿರುವುದಿಲ್ಲ.
ಮುಳ್ಳುಸಜ್ಜೆ ಹುಟ್ಟಿದರೆ ಮೆಕ್ಕೆಜೋಳ ಬೆಳೆಯನ್ನು ಬೆಳೆಯುವುದು ಕಷ್ಟ. ಆದ್ದರಿಂದ ಕೃಷಿ ಇಲಾಖೆ ಈ ಕಳೆ ನಾಶಕ್ಕೆ ಯಾವುದಾದರೂ ಒಂದು ವ್ಯವಸ್ಥೆ ಮಾಡಿಕೊಡಬೇಕು, ಹಾಗಾದರೆ ಮಾತ್ರ ರೈತರಿಗೆ ಅನುಕೂಲವಾಗುತ್ತದೆ. | ಪೂಜಾರ್ ಕೃಷ್ಣರಾಜ್, ಕೃಷಿಕ, ನರಗನಹಳ್ಳಿ ದಾವಣಗೆರೆ ತಾಲೂಕಿನ ಖುಷ್ಕಿ ಜಮೀನುಗಳಲ್ಲಿ ಮುಳ್ಳುಸಜ್ಜೆ ಮುಂಗಾರು ಹಂಗಾಮಿನಲ್ಲಿ ಯಥೇಚ್ಛವಾಗಿ ಹುಟ್ಟುತ್ತದೆ. ಈ ಮುಳ್ಳು ಸಜ್ಜೆ ನಾಶಕ್ಕೆ ಕೃಷಿ ಇಲಾಖೆಯಿಂದ ಯಾವುದೇ ಕಳೆನಾಶಕವನ್ನು ಶಿಫಾರಸು ಮಾಡುವುದಿಲ್ಲ. ಮೆಕ್ಕೆಜೋಳದ ಜತೆ ತೊಗರಿ, ಅವರೆ, ಎಣ್ಣೆಕಾಳು ಸೇರಿದಂತೆ ಬಹುಬೆಳೆ ಪದ್ಧತಿಯನ್ನು ಅನುಸರಿಸಬೇಕು. ಮುಂಗಾರು ಹಂಗಾಮಿನ ಬೆಳೆಯನ್ನು ಕಟಾವು ಮಾಡಿದ ನಂತರ ಹಿಂಗಾರು ಆಳವಾದ ಮಾಗಿ ಉಳುಮೆ ಮಾಡಬೇಕು. ಹಾಗಾದಲ್ಲಿ ಮಾತ್ರ ಈ ಮುಳ್ಳುಸಜ್ಜೆ ಬೀಜ ವಿನಾಶಗೊಳ್ಳುತ್ತವೆ. | ಡಿ.ಎಂ. ಶ್ರೀಧರ್ ಮೂರ್ತಿ, ಸಹಾಯಕ ಕೃಷಿ ನಿರ್ದೇಶಕ, ದಾವಣಗೆರೆ.