

ರಾಮನಗರ: ಕಪಾಬೆಟ್ಟ ಎಂದು ಕರೆಯುವ ಕನಕಪುರ ತಾಲೂಕು ಹಾರೋಬೆಲೆ ಸಮೀಪದ ಮುನೇಶ್ವರ ಬೆಟ್ಟವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜ.13ರಂದು ಹಿಂದು ಜಾಗರಣಾ ವೇದಿಕೆ, ವಿವಿಧ ಸಂಘಟನೆಗಳು ಮತ್ತು ಪಕ್ಷಗಳು ಒಗ್ಗೂಡಿ ಕನಕಪುರ ಚಲೋ ಹಮ್ಮಿಕೊಂಡಿವೆ ಎಂದು ಹಿಂದು ಜಾಗರಣಾ ವೇದಿಕೆ ದಕ್ಷಿಣ ಪ್ರಾಂತದ ಮುಖಂಡ ಉಲ್ಲಾಸ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂದು ಕ್ರೈಸ್ತರು ಕಪಾಲ ಬೆಟ್ಟ ಎಂದು ನಾಮಕರಣ ಮಾಡಿಕೊಂಡಿರುವ ಮುನೇಶ್ವರ ಬೆಟ್ಟ. ಹಿಂದಿನಿಂದಲೂ ಸ್ಥಳೀಯ ಹಿಂದುಗಳು ಮುನಿ ಮಾಡಿಕೊಂಡು ಬರುತ್ತಿದ್ದ ಬೆಟ್ಟವಾಗಿದೆ. ಅನಾದಿ ಕಾಲದಿಂದಲೂ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಲು ಮುನೇಶ್ವರಸ್ವಾಮಿ ಸೇವೆ ನಡೆಸುತ್ತಿದ್ದ ಸ್ಥಳ. ನಾಥಪಂಥದ ಋಷಿಮುನಿಗಳು ತಪಸ್ಸನ್ನಾಚರಿಸಿದ ಪುಣ್ಯಭೂಮಿ. ಇದೀಗ ಇಲ್ಲಿ ಬೃಹತ್ ಯೇಸು ಪ್ರತಿಮೆ ನಿರ್ಮಾಣ ಮಾಡಲು ಮುಂದಾಗುವ ಮೂಲಕ, ಸ್ಥಳೀಯವಾಗಿ ಮತಾಂತರ ಮಾಡುವ ಹುನ್ನಾರ ನಡೆದಿದೆ. ಇದನ್ನು ತಡೆಯುವ ಉದ್ದೇಶದಿಂದ ಮತ್ತು ಮುನೇಶ್ವರಸ್ವಾಮಿ ಬೆಟ್ಟವನ್ನು ಅದರ ಮೂಲ ಸ್ವರೂಪದಲ್ಲಿಯೇ ಉಳಿಸಿಕೊಳ್ಳುವುದು ಹಿಂದು ಜಾಗರಣಾ ವೇದಿಕೆ ಉದ್ದೇಶವಾಗಿದೆ ಎಂದರು.
ವಿವಿಧ ಸಂಘಟನೆಗಳು ಭಾಗಿ: ಜ.13ರಂದು ಕನಕಪುರದ ಅಯ್ಯಪ್ಪಸ್ವಾಮಿ ದೇವಾಲಯದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ತೆರಳಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಈ ಹೋರಾಟದಲ್ಲಿ ರಾಮನಗರ ಮಾತ್ರವಲ್ಲದೆ, ಮಂಡ್ಯ, ಬೆಂಗಳೂರು ಗ್ರಾಮಾಂತರ ಸೇರಿ ಬೆಂಗಳೂರು ನಗರದ ಹಿಂದು ಜಾಗರಣಾ ವೇದಿಕೆ, ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಎಲ್ಲ ಪಕ್ಷಗಳ ಮುಖಂಡರನ್ನೂ ಭೇಟಿ ಮಾಡಿ ವಾಸ್ತವ ತಿಳಿಸಿಕೊಟ್ಟು ಚಲೋದಲ್ಲಿ ಪಾಲ್ಗೊಳ್ಳುವಂತೆ ಮನವೊಲಿಸುತ್ತೇವೆ ಎಂದು ಉಲ್ಲಾಸ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿಂದು ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಗಜೇಂದ್ರಸಿಂಗ್, ತಾಲೂಕು ಅಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳಾದ ಅನಿಲ್‌ಬಾಬು, ರಾಜೇಶ್, ಧನಂಜಯ್ಯ, ಅರುಣ್‌ಸಿಂಗ್ ಮತ್ತಿತರರು ಇದ್ದರು.
13ರ ನಂತರ ಮುಂದಿನ ನಡೆ: ಯೇಸು ಪ್ರತಿಮೆ ನಿರ್ಮಾಣದ ಹಿಂದೆ, ಒಕ್ಕಲಿಗ ಸಮುದಾಯವನ್ನು ಮತಾಂತರ ಮಾಡುವ ಹುನ್ನಾರವಿದೆ. ಸ್ಥಳೀಯ ಮುಖಂಡರನ್ನೇ ಮೊದಲು ಮತಾಂತರ ಮಾಡಿಸಿ, ನಂತರ ಅವರನ್ನೇ ಪಾದ್ರಿಗಳನ್ನಾಗಿ ಮಾಡಿ ಅವರ ಮೂಲಕ ಇಡೀ ಸಮುದಾಯವನ್ನೇ ಮತಾಂತರ ಮಾಡಿಸುವ ದೊಡ್ಡ ಜಾಲವಿದೆ. ಸರ್ಕಾರದ ಅನುಮತಿ ಪಡೆಯದೆ ಅಲ್ಲಿ ಕೆಲಸಗಳು ಪ್ರಾರಂಭವಾಗಿವೆ. ಪ್ರಮುಖವಾಗಿ ಆ ಪ್ರದೇಶ ಪರಿಸರ ಸೂಕ್ಷ್ಮತೆಯ ಜಾಗವಾಗಿರುವುದರಿಂದ ಅದನ್ನು ಕಾಪಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಜೀವ ವೈವಿಧ್ಯತೆ, ಅಪಾಯದ ಅಂಚಿನಲ್ಲಿರುವ ಔಷಧೀಯ ಗುಣವುಳ್ಳ ಸಸ್ಯಸಂಕುಲ ನಾಶವಾಗಲಿದೆ. ಹಾಗಾಗಿ ಜಿಲ್ಲಾಧಿಕಾರಿಗಳು ಆ ಜಾಗವನ್ನು ಹಿಂಪಡೆಯಬೇಕೆಂದು ಒತ್ತಾಯ ಮಾಡಲಾಗುವುದು. ಇದಕ್ಕೂ ಜಿಲ್ಲಾಡಳಿತ ಸಹಮತ ವ್ಯಕ್ತಪಡಿಸದಿದ್ದರೆ ಮುಂದಿನ ಹೋರಾಟದ ಬಗ್ಗೆ 13ರ ನಂತರ ತೀರ್ಮಾನ ಮಾಡಲಾಗುವುದು ಎಂದು ಉಲ್ಲಾಸ್ ಹೇಳಿದರು.