ಎರ್ಮಾಳಿನ ವ್ಯಕ್ತಿ ಮುಕ್ಕದಲ್ಲಿ ಪತ್ತೆ!

pdb- Badu
Published on

ಪಡುಬಿದ್ರಿ: ನೆನಪು ಶಕ್ತಿ ಕುಂದಿದ ಎರ್ಮಾಳಿನ ಬಾಡ ದೇವಾಡಿಗ(70) ಎಂಬುವರು ಮನೆ ದಾರಿ ಗೊತ್ತಾಗದೆ ಕಾಲ್ನಡಿಗೆಯಲ್ಲಿ ಸಾಗಿ ಮುಕ್ಕದಲ್ಲಿ ಪತ್ತೆಯಾದ ಘಟನೆ ಸೋಮವಾರ ನಡೆದಿದೆ.

ಎರ್ಮಾಳು ದೇವಸ್ಥಾನದಲ್ಲಿ ಸ್ವಚ್ಛತಾ ಕೆಲಸ ಮಾಡಿಕೊಂಡಿದ್ದ ಬಾಡ ಭಾನುವಾರ ಸಾಯಂಕಾಲ ದೇವಸ್ಥಾನದಿಂದ ಕಾಲ್ನಡಿಗೆಯಲ್ಲಿ ಮನೆ ಕಡೆ ಹೊರಟಿದ್ದರು. ಆದರೆ ಅವರು ಮನೆಗೆ ಹೋಗದೆ ನೇರ ರಾಷ್ಟ್ರೀಯ ಹೆದ್ದಾರಿ 66 ಮೂಲಕ ಸಾಗಿ ಹೆಜಮಾಡಿ ಚೆಕ್‌ಪೋಸ್ಟ್‌ನಿಂದ ಹಾದು ಮಂಗಳೂರು ಕಡೆ ಹೋಗಿದ್ದರು. ಅವರನ್ನು ಮನೆಯ ಶ್ವಾನವೂ ಹಿಂಬಾಲಿಸಿತ್ತು. ರಾತ್ರಿ ಮನೆಗೆ ಬಾರದ ಅವರಿಗಾಗಿ ಮನೆ ಮಂದಿಯೆಲ್ಲ ಹುಡುಕಾಟ ಆರಂಭಿಸಿದರು.

ಸೋಮವಾರ ಬೆಳಗ್ಗೆ ಮನೆಯವರು ಬಾಡ ನಾಪತ್ತೆಯಾಗಿರುವ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಅತ್ತ ಮುಕ್ಕ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಮಾಡುತ್ತಿದ್ದಾಗ ಬಾಡ ಅವರು ಅಲ್ಲಿರುವುದು ಗೊತ್ತಾಗಿದೆ. ತಕ್ಷಣ ಚೆಕ್‌ಪೋಸ್ಟ್ ಸಿಬ್ಬಂದಿ ಪಡುಬಿದ್ರಿ ಪೊಲೀಸರಿಗೆ ಮಾಹಿತಿ ರವಾನಿಸಿದರು. ಬಳಿಕ ಮನೆಯವರು ಮುಕ್ಕಕ್ಕೆ ತೆರಳಿ ಅವರನ್ನು ಹಾಗೂ ಶ್ವಾನವನ್ನು ಆಟೋದಲ್ಲಿ ಮನೆಗೆ ಕರೆತಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net