

ವಿಜಯವಾಣಿ ವಿಶೇಷ ಹಾವೇರಿ
ಆಲದಕಟ್ಟಿ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ದುರಂತ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ, ಪಟಾಕಿ ಲೈಸೆನ್ಸ್ ಪಡೆದಿದ್ದ ಹಾವೇರಿಯ ವಿಜಯ ಯರೇಸೀಮಿ ಈವರೆಗೂ ಪೊಲೀಸರ ಕೈಗೆ ಸಿಕ್ಕಿಲ್ಲ. ಘಟನೆ ನಡೆದು ಎಂಟು ದಿನ ಕಳೆದರೂ ಪ್ರಮುಖ ಆರೋಪಿಯ ಸುಳಿವೇ ಸಿಕ್ಕಿಲ್ಲ.
ಆ.29ರಂದು ಆಲದಕಟ್ಟಿಯ ಭೂಮಿಕಾ ಪಟಾಕಿ ಗೋದಾಮಿನಲ್ಲಿ ವೆಲ್ಡಿಂಗ್ ಮಾಡುವಾಗ ಕಿಡಿ ತಾಗಿ ಬೆಂಕಿ ಹೊತ್ತಿಕೊಂಡು ದೊಡ್ಡ ಅನಾಹುತವೇ ಸಂಭವಿಸಿತ್ತು. ಘಟನೆಯಲ್ಲಿ ನಾಲ್ವರು ಸಜೀವ ದಹನವಾಗಿದ್ದರು. ಈ ಕುರಿತು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪಟಾಕಿ ಅಂಗಡಿ ಮಾಲೀಕರಾದ ದಾವಣಗೆರೆಯ ಕೆ.ಬಿ. ಜಯಣ್ಣ, ಸಿ.ಜಿ. ವೀರೇಶ, ವಿಜಯ ಯರೇಸೀಮಿ ಹಾಗೂ ಹಾವೇರಿಯ ಕುಮಾರಪ್ಪ ಸಾತೇನಹಳ್ಳಿ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಅವಘಡದಲ್ಲಿ ಮೃತಪಟ್ಟಿದ್ದ ಕೆ.ಬಿ. ಜಯಣ್ಣ ಅವರನ್ನೇ ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ. ಎರಡನೇ ಆರೋಪಿಯಾಗಿ, ಕಟ್ಟಡ ಮಾಲೀಕ ದಾವಣಗೆರೆಯ ಸಿ.ಜಿ. ವೀರೇಶ, ಮೂರನೇ ಆರೋಪಿಯನ್ನಾಗಿ ಪಟಾಕಿ ಮಾರಾಟದ ಲೈಸೆನ್ಸ್ ಪಡೆದವ ವಿಜಯ ಯರೇಸೀಮಿ ಹಾಗೂ ನಾಲ್ಕನೇ ಆರೋಪಿಯನ್ನಾಗಿ ಪಾಲುದಾರ ಕುಮಾರ ಸಾತೇನಹಳ್ಳಿಯನ್ನು ಆರೋಪಿಗಳು ಎಂದು ದಾಖಲಿಸಲಾಗಿದೆ.
ಮಾಲೀಕರು ಅಕ್ರಮವಾಗಿ ಹೆಚ್ಚುವರಿ ಪಟಾಕಿ ಸಂಗ್ರಹಿಸಿಟ್ಟಿದ್ದು ಹಾಗೂ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳದಿರುವುದೇ ಘಟನೆಗೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರೇ ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಕರಣದಲ್ಲಿ ಕಟ್ಟಡ ಒಬ್ಬರದು, ಪಟಾಕಿ ಲೈಸೆನ್ಸ್ ಮತ್ತೊಬ್ಬರದು, ಜಿಎಸ್‌ಟಿ ನೋಂದಣಿ ಇನ್ನೊಬ್ಬರದು, ಪಾಲುದಾರರು ಮಗದೊಬ್ಬರು. ಹೀಗೆ ಅನೇಕ ಗೊಂದಲಗಳು ಉಂಟಾಗಿದ್ದು, ಈ ಬಗ್ಗೆ ಈವರೆಗೆ ಸ್ಪಷ್ಟ ಉತ್ತರ ದೊರೆತಿಲ್ಲ.
ಲೈಸೆನ್ಸ್ ಪಡೆದಿದ್ದ ವಿಜಯ ಯರೇಸೀಮಿಯನ್ನು ಪೊಲೀಸರು ಆದಷ್ಟು ಬೇಗ ಬಂಧಿಸಬೇಕು. ಘಟನೆಯ ಸೂಕ್ತ ತನಿಖೆ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಬೇಕು. ಈ ಮೂಲಕ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಪಟಾಕಿ ಗೋದಾಮಿನಲ್ಲಿ ಸುಟ್ಟು ಕರಕಲಾದ ಹಾಗೂ ಅಳಿದುಳಿದ ವಸ್ತುಗಳನ್ನು ಆಲದಕಟ್ಟಿ ಗ್ರಾಪಂ ಸಿಬ್ಬಂದಿ ಸೋಮವಾರ ತೆರವುಗೊಳಿಸಿದ್ದಾರೆ. ಎಡಿಸಿ ಪೂಜಾರ ವೀರಮಲ್ಲಪ್ಪ ನೇತೃತ್ವದ ತಂಡ ಪರಿಶೀಲನೆ ನಡೆಸಿದ ನಂತರ ಜೆಸಿಬಿ ಹಾಗೂ ಟ್ರಾೃಕ್ಟರ್ ಮೂಲಕ ಜನವಸತಿ ಇಲ್ಲದ ಪ್ರದೇಶದಲ್ಲಿ ಗುಂಡಿ ತೆಗೆದು ಮುಚ್ಚಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಜಯ ಯರೇಸೀಮಿ ಮೂಲತಃ ಹಾವೇರಿ ವಿಶ್ವಭಾರತಿ ನಗರ ಮೂಲದವನು. ಈತನ ಪತ್ನಿಯೂ ಇಂಜಿನಿಯರ್ ಇದ್ದು ಬೆಂಗಳೂರಿನಲ್ಲೇ ವಾಸವಾಗಿದ್ದರು. ಆಗಾಗ ಹಾವೇರಿಗೆ ಬರುತ್ತಿದ್ದರು ಎಂದು ಗೊತ್ತಾಗಿದೆ.
ಮೃತ ಕೆ.ಬಿ. ಜಯಣ್ಣ ಹೆಸರಲ್ಲಿ ಜಿಎಸ್‌ಟಿ ನಂಬರ್ ಪಡೆದು ಟ್ರೇಡ್ ಮಾಡಲಾಗುತ್ತಿತ್ತು. ಎಷ್ಟು ಪ್ರಮಾಣದ ಪಟಾಕಿ ಖರೀದಿಸಲಾಗಿತ್ತು ? ಎಲ್ಲಿಂದ ಪಟಾಕಿ ಖರೀದಿಸಲಾಗಿತ್ತು ? ಸರ್ಕಾರಕ್ಕೆ ವಂಚನೆ ಮಾಡಿ ಅನಧಿಕೃತವಾಗಿ ಖರೀದಿಸಲಾಗಿತ್ತೆ ? ಎಂಬಿತ್ಯಾದಿ ಅಂಶಗಳ ಕುರಿತು ಪೊಲೀಸರು ಜಿಎಸ್‌ಟಿ ವಿಭಾಗದಿಂದ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿ ವಿಜಯ ಯರೇಸೀಮಿ ಹಾವೇರಿಯಲ್ಲೇ ಓಡಾಡುತ್ತಿದ್ದಾರೆ ಎಂಬುದು ಸುಳ್ಳು. ನಗರದ ಕೋರ್ಟ್ ಬಳಿ ಯಾರೋ ನಿಂತಿರುವ ಫೋಟೋ ವೈರಲ್ ಮಾಡಿ, ವಿಜಯ ಎನ್ನಲಾಗುತ್ತಿದೆ. ಆದರೆ, ಆತ ವಿಜಯ ಅಲ್ಲ. ವಿಶೇಷ ತಂಡ ರಚಿಸಲಾಗಿದ್ದು, ಶೀಘ್ರವೇ ಬಂಧಿಸಲಾಗುವುದು.I ಶಿವಕುಮಾರ ಗುಣಾರೆ, ಎಸ್‌ಪಿ, ಹಾವೇರಿ