ಹಳದಿ ಎಲೆ ರೋಗಕ್ಕೆ ಪರಿಹಾರೋಪಾಯ, ಕೇಂದ್ರ ರಾಜ್ಯಕ್ಕೆ ವರದಿ ಸಲ್ಲಿಕೆ

Areca-Nuts new
Published on

ಮಂಗಳೂರು: ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಆತಂಕ ಸೃಷ್ಟಿಸಿರುವ ಅಡಿಕೆ ಹಳದಿ ಎಲೆ ರೋಗಕ್ಕೆ ಸಂಬಂಧಿಸಿದಂತೆ ಕ್ಯಾಂಪ್ಕೊ ನೇತೃತ್ವದಲ್ಲಿ ಮಂಗಳವಾರ ವಿಜ್ಞಾನಿಗಳು, ಬೆಳೆಗಾರರೊಂದಿಗೆ ಚರ್ಚೆ ನಡೆಸಿ ಅಲ್ಪಕಾಲಿಕ ಮತ್ತು ದೀರ್ಘಕಾಲಿಕ ಪರಿಹಾರೋಪಾಯಗಳನ್ನು ರೂಪಿಸಲಾಗಿದ್ದು, ಇದರ ವಿಸ್ತೃತ ವರದಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದ್ದಾರೆ.

ಕ್ಯಾಂಪ್ಕೊದಲ್ಲಿ ಹಳದಿಎಲೆ ರೋಗದ ಪರಿಹಾರೋಪಾಯ ಮತ್ತು ಅಡಕೆಯ ಪರ್ಯಾಯ ಉಪಯೋಗ ಬಗ್ಗೆ ಹಮ್ಮಿಕೊಂಡ ವಿಚಾರ ಸಂಕಿರಣದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು.

ಹಳದಿ ಎಲೆ ರೋಗದ ಬಗ್ಗೆ ಈಗಾಗಲೇ ಸರ್ಕಾರಗಳ ಗಮನ ಸೆಳೆಯಲಾಗಿದ್ದು, ಸರ್ಕಾರ 25 ಕೋಟಿ ರೂ. ಸಂಶೋಧನೆಗೆ ಮೀಸಲಿರಿಸಿದೆ. ಸಂಸ್ಥೆಯಿಂದಲೂ ಈ ಬಗ್ಗೆ ತಜ್ಞರೊಂದಿಗೆ ಚರ್ಚಿಸಲಾಗಿದ್ದು, ಕೆಲವು ಪರಿಹಾರೋಪಾಯಗಳನ್ನು ಕಂಡುಕೊಳ್ಳಲಾಗಿದೆ ಎಂದರು.

ಅಡಕೆ ಕ್ಯಾನ್ಸರ್ ಕಾರಕ ಅಲ್ಲ ಎಂದು ಅಟ್ಲಾಂಟ ವಿಶ್ವವಿದ್ಯಾಲಯದ ಸಂಶೋಧನೆ ಹೇಳಿದ್ದು, ಇದರ ಬಗ್ಗೆ ಕೇಂದ್ರಕ್ಕೆ ತಿಳುವಳಿಕೆ ನೀಡುವ ಪ್ರಯತ್ನವೂ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಕ್ಯಾಂಪ್ಕೊ ಎಂಡಿ ಎಚ್.ಎಂ.ಕೃಷ್ಣ ಕುಮಾರ್, ಅಡಕೆ ಮತ್ತು ಸಾಂಬಾರ ವಸ್ತು ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ.ಹೋಮಿ ಚೆರಿಯನ್, ಕೃಷಿಕ ಡಾ.ಡಿ.ಸಿ.ಚೌಟ, ಎಫ್‌ಎಸ್‌ಎಸ್‌ಎಐ ವೈಜ್ಞಾನಿಕ ಸಮಿತಿ ಸದಸ್ಯೆ ಡಾ.ಇಂದ್ರಾಣಿ ಕರುಣಾಸಾಗರ್, ಅಡಕೆ ಸಂಶೋಧನಾ ಪ್ರತಿಷ್ಠಾನದ ಡಾ.ಕೇಶವ ಭಟ್, ಕ್ಯಾಂಪ್ಕೊ ನಿರ್ದೇಶಕರಾದ ಪದ್ಮರಾಜ್ ಪಟ್ಟಾಜೆ, ಜಯಪ್ರಕಾಶ ನಾರಾಯಣ್, ಕೃಷ್ಣ ಪ್ರಸಾದ್ ಮಡ್ತಿಲ, ಶಂಭುಲಿಂಗ ಹೆಗ್ಡೆ, ಮಹೇಶ ಚೌಟ, ರಾಘವೇಂದ್ರ ಭಟ್ ಮತ್ತಿತರರಿದ್ದರು.

ಏನು ಮಾಡಬಹುದು?: ಒಂದು ರೀತಿಯ ಫೈಟೊಪ್ಲಾಸ್ಮಾದಿಂದಾಗಿ ಹಳದಿ ಎಲೆ ರೋಗ ಉಂಟಾಗುತ್ತಿದ್ದು, ಜಗತ್ತಿನಲ್ಲೇ ಎಲ್ಲೂ ಈವರೆಗೆ ಈ ಫೈಟೊಪ್ಲಾಸಂ ನಿಯಂತ್ರಣಕ್ಕೆ ಉಪಾಯ ಸಿಕ್ಕಿಲ್ಲ. ಆದರೆ ಬಯೊಡಿಗ್ರೇಡೆಬಲ್ ಪ್ಲಾಸ್ಟಿಕ್ ಹೊದಿಕೆಯನ್ನು ತೋಟಕ್ಕೆ ಹೊದಿಸುವ ಮುಖೇನ ತಾತ್ಕಾಲಿಕವಾಗಿ ರೋಗ ನಿಯಂತ್ರಣ ಸಾಧ್ಯ ಎಂದು ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ. ದೀರ್ಘಕಾಲಿಕ ಪರಿಹಾರವಾಗಿ ಪರ್ಯಾಯ ಬೆಳೆಗಳಾದ ರಂಬುಟಾನ್, ಮ್ಯಾಂಗೊಸ್ಟೀನ್, ತಾಳೆ ಇತ್ಯಾದಿಗಳನ್ನು ಬೆಳೆಸಬಹುದು ಎಂದು ಸಿಪಿಸಿಆರ್‌ಐ ಮಾಜಿ ನಿರ್ದೇಶಕ ಡಾ.ಪಿ.ಚೌಡಪ್ಪ ಹೇಳಿದರು.

ಬಯೊಡಿಗ್ರೇಡಬಲ್ ಪ್ಲಾಸ್ಟಿಕ್ ಹೊದಿಕೆ ಹೊದಿಸುವುದಕ್ಕೆ ಸ್ವಲ್ಪ ವೆಚ್ಚ ತಗಲುತ್ತದೆ. ಅದಕ್ಕಾಗಿ ರಾಜ್ಯ ಸರ್ಕಾರದ ಅಡಕೆ ಕಾರ್ಯಪಡೆ ಹಾಗೂ ಅಡಕೆ ಮತ್ತು ಸಾಂಬಾರ ವಸ್ತು ಅಭಿವೃದ್ಧಿ ನಿರ್ದೇಶನಾಲಯದವರು ಸಹಕಾರ ನೀಡುವಂತೆ ವಿನಂತಿ ಮಾಡಲಾಗುವುದು ಎಂದೂ ತಿಳಿಸಿದರು.

ಅಡಕೆಯ ನ್ಯಾನೊ ಕಣದ ಉಪಯೋಗ: ಅಡಕೆಯ ಪರ್ಯಾಯ ಉಪಯೋಗಗಳ ಬಗ್ಗೆಯೂ ಕ್ಯಾಂಪ್ಕೊ ಗಮನ ಹರಿಸುತ್ತಿದೆ. ಈ ನಿಟ್ಟಿನಲ್ಲಿ ಶಿರಸಿ ಮೂಲದ ಡಾ.ಗುರುಮೂರ್ತಿ ಹೆಗ್ಡೆ ಎಂಬ ವಿಜ್ಞಾನಿ ಅಡಕೆಯ ನ್ಯಾನೊ ಕಣಗಳ ತಂತ್ರಜ್ಞಾನ ಬಳಸಿಕೊಂಡು ಗಾಜು, ಬ್ಯಾಟರಿ ಇತ್ಯಾದಿ ವಸ್ತುಗಳ ಉತ್ಪಾದನೆಯ ಬಗ್ಗೆ ಸಂಶೋಧನೆ ಮಾಡಿದ್ದಾರೆ. ಇಂತಹ ವಿಚಾರಕ್ಕೆ ಪ್ರೋತ್ಸಾಹ ನೀಡುವುದಕ್ಕೂ ಕ್ಯಾಂಪ್ಕೊ ಚಿಂತನೆ ನಡೆಸಿದೆ ಎಂದು ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net