

ಮಂಗಳೂರು: ಕಳೆದ ಒಂದು ವಾರದಿಂದ ಕರಾವಳಿಯಲ್ಲಿ ಸುರಿಯುತ್ತಿದ್ದ ಮಳೆಗೆ ಗುರುವಾರ ಬ್ರೇಕ್ ಬಿದ್ದಿದ್ದು, ಕರಾವಳಿಯಲ್ಲಿ ಗುರುವಾರ ಮತ್ತೆ ಮಳೆ ಪ್ರಮಾಣ ಕಡಿಮೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಜು.12ರಂದು ಯೆಲ್ಲೋ ಅಲರ್ಟ್ ಘೋಷಿಸಿದೆ.
ದ.ಕ.ಜಿಲ್ಲೆಯಲ್ಲಿ ಗುರುವಾರ ಹಗಲು ಬಿಸಿಲು, ಮೋಡ ಕಂಡುಬಂದಿದ್ದು, ಅಲ್ಲಲ್ಲಿ ತುಂತುರು ಮಳೆಯಾಗಿದೆ. ಮಂಗಳೂರಲ್ಲಿ ರಾತ್ರಿ ವೇಳೆ ಮಳೆ ಕಾಣಿಸಿದೆ. ಯೆಲ್ಲೋ ಅಲರ್ಟ್ ಇದ್ದರೂ ಭಾರಿ ಮಳೆಯಾಗಿಲ್ಲ. ಮಧ್ಯಾಹ್ನ ನಂತರ ಎಲ್ಲೆಡೆ ಹನಿಮಳೆಯ ವಾತಾವರಣ. ಸಂಜೆಯಾಗುತ್ತಿದ್ದಂತೆ ಮಂಗಳೂರು ಹಾಗೂ ಗ್ರಾಮೀಣ ಭಾಗದಲ್ಲಿ ಗುಡುಗು ಸಹಿತ ಮಳೆ ಸುರಿದಿದೆ. ಪಶ್ಚಿಮಘಟ್ಟದ ಕೆಳಭಾಗದ ಪ್ರದೇಶಗಳಾದ ಚಾರ್ಮಡಿ, ಶಿರಾಡಿ, ಆಗುಂಬೆ ಸುತ್ತಮುತ್ತ ಸಾಧಾರಣಕ್ಕಿಂತ ಉತ್ತಮ ಮಳೆಯಾಗಿದೆ. ಕರಾವಳಿಯಲ್ಲಿ ಗಂಟೆಗೆ 35ಕಿ.ಮೀ ನಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹಾಗಾಗಿ ಮೀನುಗಾರರು ಸಮುದ್ರಕ್ಕೆ ಹೋಗದಂತೆ ಸೂಚಿಸಲಾಗಿದೆ. ಕಳೆದ 24 ಗಂಟೆಗಳ ಕಾಲಾವಧಿಯಲ್ಲಿ ದ.ಕ ಜಿಲ್ಲೆಯಲ್ಲಿ ಮಳೆಯಿಂದಾಗಿ ಆಸ್ತಿಪಾಸ್ತಿ, ಪ್ರಾಣಾ ಹಾನಿ ಸಂಭವಿಸಿಲ್ಲ.
*ಯೆಲ್ಲೋ ಅಲರ್ಟ್
ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಅಲ್ಲಲ್ಲಿ ಮಧ್ಯಾಹ್ನ ನಂತರ, ಸಂಜೆ ಹಾಗೂ ರಾತ್ರಿ ಸಾಮಾನ್ಯ ಮಳೆಯ ಮುನ್ಸೂಚನೆ ಇದ್ದುದರಿಂದ ಶುಕ್ರವಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಸ್ವಲ್ಪ ಜಾಸ್ತಿ ಮಳೆಯಾಗುವ ಸಾಧ್ಯತೆ ಇದೆ. ಈಗಿನಂತೆ ಜುಲೈ 12ರಿಂದ ಮುಂಗಾರು ಚುರುಕಾಗುವ ಲಕ್ಷಣಗಳಿದ್ದು, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ ಇದೆ. ಜುಲೈ 14ರಿಂದ ಮತ್ತು ಅದರ ಮುಂದಿನ 3 ಅಥವಾ 4 ದಿನಗಳ ಕಾಲ ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ ಇದೆ. ದಕ್ಷಿಣ ಒಳನಾಡು ಅಲ್ಲಲ್ಲಿ ಸಾಮಾನ್ಯ ಮಳೆಯ ಸಾಧ್ಯತೆ ಇದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಜುಲೈ 23ರಿಂದ ಮುಂದಿನ 10 ದಿನಗಳವರೆಗೂ ಮಳೆಯ ಮುನ್ಸೂಚನೆ ಇದೆ ಎಂದು ಹವಾಮಾಣ ಇಲಾಖೆ ಮಾಹಿತಿ ನೀಡಿದೆ.
-----------------
ಬೆಳ್ತಂಗಡಿ ಗರಿಷ್ಠ ಮಳೆ
ಗುರುವಾರ ಬೆಳಗ್ಗಿನ ವರೆಗೆ ಜಿಲ್ಲೆಯ ಬೆಳ್ತಂಗಡಿಯಲ್ಲಿ ಗರಿಷ್ಠ 15.3 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯ ದಿನದ ಸರಾಸರಿ ಮಳೆ 5.7 ಮಿ.ಮೀ. ಆಗಿದೆ. ಬಂಟ್ವಾಳ 1.2 ಮಿ.ಮೀ, ಮಂಗಳೂರು 3.7 ಮಿ.ಮೀ, ಪುತ್ತೂರು 1.8 ಮಿ.ಮೀ, ಸುಳ್ಯ 1.3 ಮಿ.ಮೀ, ಮೂಡುಬಿದಿರೆ 3.2 ಮಿ.ಮೀ, ಕಡಬ 1.4 ಮಿ.ಮೀ, ಮೂಲ್ಕಿ 3.1 ಮಿ.ಮೀ, ಉಳ್ಳಾಲ 3.1 ಮಿ.ಮೀ. ಮಳೆಯಾಗಿದೆ. ಉಪ್ಪಿನಂಗಡಿಯಲ್ಲಿ ನೇತ್ರಾವತಿ ಮತ್ತು ಕುಮಾರಧಾರ ನದಿ 25 ಮೀಟರ್ ಹಾಗೂ ಬಂಟ್ವಾಳದಲ್ಲಿ ನೇತ್ರಾವತಿ ನದಿ 3.2 ಮೀಟರ್‌ನಲ್ಲಿ ಹರಿಯುತ್ತಿದೆ.