ಸಿಡಿಲಿಗೆ ಕಾರ್ಕಳ ನಿವಾಸಿ ಬಲಿ: ಕರಾವಳಿಗೆ ಐದು ದಿನ ಯೆಲ್ಲೋ ಅಲರ್ಟ್!

RAIN NEW
Published on

ಮಂಗಳೂರು/ಉಡುಪಿ/ಕಾರ್ಕಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮಳೆಯಬ್ಬರ ಕಡಿಮೆಯಾಗಿದೆ. ಉಡುಪಿ ಜಿಲ್ಲಾದ್ಯಂತ ದಿನವಿಡೀ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನ ಬಳಿಕ ವಿವಿಧೆಡೆ ಗುಡುಗು ಮಿಂಚು ಸಹಿತ ಉತ್ತಮ ಮಳೆಯಾಗಿದೆ.

ಬೈಲೂರು ಸಮೀಪದ ನೀರೆ ಎಂಬಲ್ಲಿ ಸೋಮವಾರ ಸಾಯಂಕಾಲ 4 ಗಂಟೆ ಸುಮಾರಿಗೆ ಸಿಡಿಲು ಬಡಿದು ಮನೆಯಲ್ಲಿದ್ದ ವಾದಿರಾಜ ಆಚಾರ್ಯ(60) ಎಂಬುವರು ಮೃತಪಟ್ಟಿದ್ದಾರೆ. ವಿದ್ಯುತ್ ಪರಿಕರಗಳು ಸುಟ್ಟು ಕರಕಲಾಗಿದ್ದು, ಮನೆಗೂ ಹಾನಿಯಾಗಿದೆ. ಸಿಡಿಲಿನ ಆಘಾತಕ್ಕೆ ಈ ಪರಿಸರದ ಹಲವು ಮನೆಗಳಿಗೂ ಹಾನಿ ಸಂಭವಿಸಿದೆ. ವಾದಿರಾಜ ಆಚಾರ್ಯ ಅವರಿಗೆ ಬೈಲೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಮುಂದಾದರೂ, ಅಷ್ಟರಲ್ಲಿ ಅವರು ಮೃತಪಟ್ಟಿದ್ದರು. ಕಾರ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹ ಮಹಜರು ನಡೆಸಲಾಗಿದೆ. ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಸ್ಥಳಕ್ಕೆ ಕಾರ್ಕಳ ಪ್ರಭಾರ ತಹಸೀಲ್ದಾರ್ ಪುರಂದರ, ಕಂದಾಯ ನಿರೀಕ್ಷಕ ಶಿವಪ್ರಸಾದ್ ಭಟ್ ಮೊದಲಾದವರು ಭೇಟಿ ನೀಡಿದ್ದಾರೆ.

ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದಲ್ಲಿ ಮನೆಗೆ ಸಿಡಿಲು ಬಡಿದು, ಉಡುಪಿ ತಾಲೂಕಿನ ಪಡುತೋನ್ಸೆ ಗ್ರಾಮದಲ್ಲಿ ಮನೆಗೆ ಗಾಳಿ ಮಳೆಯಿಂದ ಹಾನಿಯಾಗಿದೆ. ಕಾಪು, ಪಡುಬಿದ್ರಿ, ಕೊಕ್ಕರ್ಣೆ, ಮಂದಾರ್ತಿ, ಕಾರ್ಕಳ, ಕೋಟ, ಸಿದ್ದಾಪುರ, ಗೋಳಿಯಂಗಡಿ, ಗಂಗೊಳ್ಳಿ, ಗುಜ್ಜಾಡಿ, ತ್ರಾಸಿ, ಹೆಬ್ರಿ, ಬೆಳ್ಮಣ್ ಮೊದಲಾದ ಕಡೆ ಧಾರಾಕಾರ ಮಳೆಯಾಗಿದೆ. ಉಡುಪಿ ನಗರ ಸುತ್ತಮುತ್ತ ಸಣ್ಣ ಪ್ರಮಾಣದಲ್ಲಿ ಗುಡುಗು ಮಿಂಚಿನೊಂದಿಗೆ ಸಾಧಾರಣ ಮಳೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ರಾತ್ರಿಯಿಂದ ಮುಂಜಾನೆವರೆಗೆ ಮಳೆ ಸುರಿದು ಆ ಬಳಿಕ ಬಿಸಿಲು ಕಾಣಿಸಿಕೊಂಡಿದೆ. ಹಗಲು ವೇಳೆಯಲ್ಲಿ ಬಿಸಿಲಿನ ಸಂಪೂರ್ಣ ವಾತಾವರಣವಿತ್ತು. ಇನ್ನೊಂದೆಡೆ ದಟ್ಟ ಮೋಡಗಳ ಚಲನೆಯೂ ಜೋರಾಗಿತ್ತು. ಸಾಯಂಕಾಲ ವೇಳೆ ಸುಬ್ರಹ್ಮಣ್ಯ, ಸುಳ್ಯ ಭಾಗದಲ್ಲಿ ಮಳೆಯಾಗಿದೆ.

ಮೂಡುಬಿದಿರೆಯಲ್ಲಿ ಅತ್ಯಧಿಕ:  ಸೋಮವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಉಡುಪಿ 30.7, ಬ್ರಹ್ಮಾವರ 24.4, ಕಾಪು 107, ಕುಂದಾಪುರ 26.7, ಬೈಂದೂರು 16.4, ಕಾರ್ಕಳ 109.9, ಹೆಬ್ರಿ 28.6 ಮಿ.ಮೀ. ಸಹಿತ ಉಡುಪಿ ಜಿಲ್ಲೆಯಲ್ಲಿ ಸರಾಸರಿ 47.5 ಮಿ.ಮೀ. ಮಳೆ ಸುರಿದಿದೆ. ಬೆಳ್ತಂಗಡಿ 90.9, ಬಂಟ್ವಾಳ 43.8, ಮಂಗಳೂರು 57.6, ಪುತ್ತೂರು 24.8, ಸುಳ್ಯ 30.6, ಕಡಬ 67.8 ಮಿ.ಮೀ. ಸಹಿತ ದ.ಕ. ಜಿಲ್ಲೆಯಲ್ಲಿ ಸರಾಸರಿ 63.2 ಮಿ.ಮೀ. ಮಳೆಯಾಗಿದೆ. ಮೂಡುಬಿದಿರೆ ತಾಲೂಕಿನಲ್ಲಿ ಅತ್ಯಧಿಕ 117.5 ಮಿ.ಮೀ. ಮಳೆಯಾಗಿದೆ. ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 30.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಐದು ದಿನ ಯೆಲ್ಲೋ ಅಲರ್ಟ್!: ಈ ನಡುವೆ ಅರಬ್ಬಿ ಸಮುದ್ರದಲ್ಲಿ ಕಡಿಮೆ ಒತ್ತಡ ಪ್ರದೇಶವೊಂದು ಉಂಟಾಗುವ ಸಾಧ್ಯತೆ ಮತ್ತಷ್ಟು ದಟ್ಟವಾಗಿದೆ. ಪ್ರಸ್ತುತ ಪೂರ್ವ ಮಧ್ಯ ಅರಬ್ಬಿ ಸಮುದ್ರ ಭಾಗದಲ್ಲಿ ಕೇಂದ್ರೀಕೃತವಾಗಿರುವ ಇದು, ಮುಂದಿನ 48 ಗಂಟೆಗಳಲ್ಲಿ ಪಶ್ಚಿಮ, ವಾಯುವ್ಯ ದಿಕ್ಕಿನತ್ತ ಸಂಚರಿಸಲಿದೆ. ಇದೇ ವೇಳೆ ಸಮುದ್ರದಲ್ಲಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುತ್ತಿದ್ದು, ನ.18ರವರೆಗೂ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಶನಿವಾರದವರೆಗೂ ಕರಾವಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net