ನಾಳೆ 6 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್:ಮಲೆನಾಡು, ಕರಾವಳಿಯಲ್ಲಿ ಬಿರುಸು

rain
Published on

ಬೆಂಗಳೂರು: ಕರಾವಳಿ, ಮಲೆನಾಡು ವ್ಯಾಪ್ತಿಯ ಜಿಲ್ಲೆಗಳಲ್ಲಿ ಭಾನುವಾರವೂ ಭರ್ಜರಿ ಮಳೆ ಬಿದ್ದಿದೆ. ಕಳೆದ 24 ಗಂಟೆ ಅವಧಿಯಲ್ಲಿ ಶಿವಮೊಗ್ಗದ ಆಗುಂಬೆ 12, ದಕ್ಷಿಣ ಕನ್ನಡದ ಸುಳ್ಯ 9, ಪುತ್ತೂರು 8, ಉತ್ತರ ಕನ್ನಡದ ಗೋಕರ್ಣ 9, ಮಂಕಿ 8, ಕದ್ರಾ 8, ಕ್ಯಾಸಲ್ ರ್ಯಾಕ್​​​​​​ 8, ಕೊಡಗಿನ ಭಾಗಮಂಡಲ 9 ಸೆಂಮೀ ಮಳೆಯಾಗಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ,ಉಡುಪಿಯಲ್ಲಿ ಜು.7ರಿಂದ ಜು.11ರವರೆಗೆ ಹಾಗೂ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದಲ್ಲಿ ಜು.7ರಂದು ಭಾರಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ಕರಾವಳಿ ತಟ್ಟದ ಹತ್ತಿರ ಗಂಟೆಗೆ 50-60 ಕಿ.ಮೀ.ವೇಗದಲ್ಲಿ ಗಾಳಿ ಬೀಸಲಿದೆ. ಮೇಲಿನ ಅವಧಿಯಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಇಲಾಖೆ ಎಚ್ಚರಿಕೆ ಕೊಟ್ಟಿದೆ.

ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ತುಮಕೂರು, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಕೋಲಾರ, ಮಂಡ್ಯ, ಹಾಸನ,ಮೈಸೂರು ಮತ್ತು ಚಾಮರಾಜನಗರದಲ್ಲಿ ಮುಂದಿನ 4 ದಿನ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ವರ್ಷಧಾರೆಯಾಗಲಿದೆ.

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆ ಮೋಡ ಮುಸುಕಿದ ವಾತಾವರಣದೊಂದಿಗೆ ಹಗುರ ಮಳೆಯಾಗಲಿದೆ. ಪ್ರತಿ ಗಂಟೆಗೆ ಗಾಳಿಯ ವೇಗ 40-50 ಕಿ.ಮೀ. ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28 ಮತ್ತು 20 ಡಿ.ಸೆ. ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net