

ಬೆಂಗಳೂರು: ಕರಾವಳಿ ವ್ಯಾಪ್ತಿಯ ಪ್ರದೇಶಗಳಲ್ಲಿ ಮಳೆ ಇಳಿಮುಖವಾದರೆ, ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 2 ದಿನ ಜೋರಾಗಿ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಕಳೆದ 24 ಗಂಟೆ ಅವಧಿಯಲ್ಲಿ ಗದಗದ ನರಗುಂದ 10, ಕೊಪ್ಪಳದ ಕುಕನೂರು 9, ವಿಜಯಪುರ 7 ಕೋಲಾರ 7, ಯಾದಗಿರಿಯ ಹುಣಸಗಿ 7, ಬಾಗಲಕೋಟೆಯ ಲೋಕಾಪುರ 6, ದಾವಣಗೆರೆಯ ಜಗಳೂರು 6, ಚಿಕ್ಕಬಳ್ಳಾಪುರದ ಚಿಂತಾಮಣಿ 6 ಮತ್ತು ತುಮಕೂರಿನ ಬರಗೂರು 6 ಸೆಂಮೀ ಮಳೆಯಾಗಿತ್ತು.
ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂ.ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ರಾಮನಗರದಲ್ಲಿ ಆ.9ರಿಂದ ಆ.10ರವರೆಗೆ ಹಾಗೂ ಬಾಗಲಕೋಟೆ, ಗದಗ,ಚಿತ್ರದುರ್ಗ, ತುಮಕೂರು, ಚಾಮರಾಜನಗರದಲ್ಲಿ ಆ.9ರಂದು ಬಿರುಸಾಗಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ. ಹಾಸನದಲ್ಲಿ ಆ.11 ರಂದು ಯೆಲ್ಲೋ ಅಲರ್ಟ್ ಇರಲಿದೆ.
ಕೊಡಗು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಧಾರವಾಡ, ಚಿಕ್ಕಮಗಳೂರು, ದಾವಣಗೆರೆ ಮತ್ತು ವಿಜಯನಗರದಲ್ಲಿ ಮುಂದಿನ 4 ದಿನ ಮೋಡದ ಕವಿದ ವಾತಾವರಣದೊಂದಿಗೆ ಸಾಧಾರಣ ವರ್ಷಧಾರೆಯಾಗಲಿದೆ. ಬೆಂಗಳೂರು ಮತ್ತ ಅದರ ಸುತ್ತಮುತ್ತ ಪ್ರದೇಶಗಳಲ್ಲಿ ಮುಂದಿನ 2 ದಿನ ಗುಡುಗು ಸಹಿತ ಮಳೆ ಬೀಳಲಿದೆ. ಗಂಟೆಗೆ 50 ಕಿಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 29 ಮತ್ತು 21 ಡಿ.ಸೆ. ಇರಲಿದೆ.